Vaamana.News

Saturday, March 15, 2025

27

 

*"ವಾಮನ" ಚಿತ್ರದ ತಾಯಿ - ಮಗನ ಬಾಂಧವ್ಯದ ಹಾಡಿಗೆ ಅಭಿಮಾನಿಗಳು ಫಿದಾ* .

 

 *ಚೇತನ್ ಗೌಡ ನಿರ್ಮಾಣದ,‌ ಶಂಕರ್ ರಾಮನ್ ಎಸ್, ನಿರ್ದೇಶನದ ಹಾಗೂ ಧನ್ವೀರ್ ನಾಯಕನಟರಾಗಿ, ನಟಿಸಿರುವ ಈ ಚಿತ್ರ ಏಪ್ರಿಲ್ 10 ರಂದು ತೆರೆಗೆ* .

 

 "ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್" ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ಅವರು ನಿರ್ಮಿಸಿರುವ, ಶಂಕರ್ ರಾಮನ್ ಎಸ್, ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ "ವಾಮನ" ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ "ಕಂದ ಕನಸ ರೂಪ" ಎಂಬ ತಾಯಿ - ಮಗನ ಬಾಂಧವ್ಯದ ಕುರಿತಾದ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ದರ್ಶನ್  ಅವರು ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. "ಕಾಂತಾರ" ಖ್ಯಾತಿಯ ವೆಂಕಟೇಶ್ ಡಿ.ಸಿ ಈ ಹಾಡನ್ನು ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. A2 music ಮೂಲಕ ಈ ಹಾಡು ಬಿಡುಗಡೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 

ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಈಗಾಗಲೇ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದ್ದು, ತಾಯಿ - ಮಗನ ಬಾಂಧವ್ಯದ ಈ ಹಾಡು ಇಂದು ಬಿಡುಗಡೆಯಾಗಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಧನ್ಯವಾದ. ಈಗಾಗಲೇ "ವಾಮನ" ಚಿತ್ರದ ಹಾಡುಗಳು ಜನರ ಮನ ತಲುಪಿದೆ. ನಾನು ಹೋದ ಕಡೆ ಎಲ್ಲಾ "ಮುದ್ದು ರಾಕ್ಷಸಿ" ಹಾಡಿನ ನಿರ್ಮಾಪಕರು ಎಂದೇ ಗುರುತಿಸುತ್ತಿದ್ದಾರೆ. ತಾಯಿ - ಮಗನ ಬಾಂಧವ್ಯದ ಈ ಹಾಡು ಸಹ ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಸಂಗೀತ ಸಂಯೋಜಿಸಿರುವ  "ಬಿ.ಅಜನೀಶ್ ಲೋಕನಾಥ್ ಅವರಿಗೆ ಹಾಗೂ ಮ್ಯೂಸಿಕ್ ಪಾರ್ಟ್ನರ್ "ಬಾಬಿ" ರವರಿಗೆ  ಧನ್ಯವಾದ ತಿಳಿಸಿದರು. ಚಿತ್ರತಂಡದ ಸಹಕಾರದಿಂದ "ವಾಮನ" ಚಿತ್ರ ಚೆನ್ನಾಗಿ ಮೂಡಿಬಂದಿದೆ. ಏಪ್ರಿಲ್ 10 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ‌. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಚೇತನ್ ಗೌಡ. ಸಹ ನಿರ್ಮಾಪಕಿ ರೂಪ ಚೇತನ್ ಅವರು ಸಹ ಹಾಡು ಬಿಡುಗಡೆ ಮಾಡಿಕೊಟ್ಟ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ಹೇಳದರು.

ಮೊದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಾಯಕ ಧನ್ವೀರ್, ಇದು ನನ್ನ ಅಭಿನಯದ ನಾಲ್ಕನೇ ಚಿತ್ರ. ನನ್ನ ಮೊದಲ ಚಿತ್ರದಿಂದಲೂ ಎಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರ ಋಣಿ. "ವಾಮನ" ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಪ್ರಮೋದ್ ಮರವಂತೆ ಅವರು ಬರೆದಿರುವ ಅಮ್ಮ - ಮಗನ ಬಾಂಧವ್ಯದ ಈ ಹಾಡು ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ ಎಂದರು.

 

"ವಾಮನ" ಚಿತ್ರದ ತಾಯಿ - ಮಗನ ಬಾಂಧವ್ಯದ ಈ ಹಾಡನ್ನು ವಿಶ್ವದ ಎಲ್ಲಾ ತಾಯಂದಿರಿಗೆ ಅರ್ಪಿಸುತ್ತೇನೆ ಎಂದು ಮಾತನಾಡಿದ ನಿರ್ದೇಶಕ‌ ಶಂಕರ್ ರಾಮನ್ ಎಸ್, ನನಗೆ ತಾಯಿಯನ್ನು ಕುರಿತಾದ "ಕೈ ತುತ್ತು ಕೊಟ್ಟವಳೆ ಐ ಲವ್ ಯು ಮದರ್ ಇಂಡಿಯಾ" ಹಾಗೂ "ಬೇಡುವೆನು ವರವನು ಕೊಡೆ ತಾಯಿ ಜನುಮವನು" ಹಾಡುಗಳು ತುಂಬಾ ಇಷ್ಟ. ಅಂತಹುದೇ ಹಾಡು ನಮ್ಮ ಚಿತ್ರಕ್ಕೆ ಬೇಕು ಎಂದು ಕೇಳಿದಾಗ ಪ್ರಮೋದ್ ಮರವಂತೆ ಈ ಸುಂದರ ಹಾಡನ್ನು ಬರೆದುಕೊಟ್ಟಿದ್ದಾರೆ. ವೆಂಕಟೇಶ್ ಡಿ.ಸಿ ಅವರು ಸೊಗಸಾಗಿ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಅಷ್ಟೇ ಸೊಗಸಾಗಿ ಸಂಗೀತ ಸಂಯೋಜಿಸಿದ್ದಾರೆ. ತಾಯಿ ತನ್ನ ಬವಣೆಗಳನ್ನು ಮಗನ ಮುಂದೆ ಹೇಳಿಕೊಳ್ಳುವ ಈ ಹಾಡು ಎಲ್ಲರಿಗೂ ಇಷ್ಟವಾಗಲಿದೆ. ಇನ್ನೂ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಚೇತನ್ ಗೌಡ ಹಾಗೂ ರೂಪ ಚೇತನ್ ಅವರಿಗೆ, ನಾಯಕ ಧನ್ವೀರ್ ಅವರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು. ಹಾಗೂ "ತಾಯಿಯ ವ್ಯಥೆ, ವಾಮನ"ನ ಕಥೆ, ಏಪ್ರಿಲ್ 10 ಥಿಯೇಟರ್ ಗಳಲ್ಲಿ ಸಿನಿಮಾ ನೋಡುವಂತೆ ಕರ್ನಾಟಕದ ಜನತೆಯನ್ನು ಕೇಳಿಕೊಂಡರು.

 

ಹಾಡು ಬರೆದಿರುವ ಪ್ರಮೋದ್ ಮರವಂತೆ, ‌ಗಾಯಕ ವೆಂಕಟೇಶ್ ಡಿ.ಸಿ, ಚಿತ್ರದಲ್ಲಿ ನಟಿಸಿರುವ ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ.ಆರ್ ಪೇಟೆ, ಕಾಕ್ರೋಜ್ ಸುಧೀ ಮುಂತಾದವರು "ವಾಮನ" ಚಿತ್ರದ ಕುರಿತು ಮಾತನಾಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,