Avalai Kanchana.News

Tuesday, March 18, 2025

42

 

ಅವಳೆ ಕಾಂಚನ ಟ್ರೇಲರ್ ಬಿಡುಗಡೆ

 

       ’ಅವಳೆ ಕಾಂಚನ’ ಚಿತ್ರದ ಟ್ರೇಲರನ್ನು ಹಿರಿಯ ಪತ್ರಕರ್ತ ಕೆ.ಜೆ.ಕುಮಾರ್ ಬಿಡುಗಡೆ ಮಾಡಿದರು. ’ನಮ್ಮೂರ ರಾಮಾಯಣ’ ಚಿತ್ರದ ಮೂಲಕ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಹಿರಿಯ ತಂತ್ರಜ್ಘ ಮಂಡ್ಯನಾಗರಾಜ್ ಹದಿನೆಂಟನೇ ಅನುಭವ ಎನ್ನುವಂತೆ ಬಂಡವಾಳ ಹೂಡುವ ಜತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಉಪಸ್ತಿತರಿದ್ದರು.

 

        ನಿರ್ದೇಶಕರು ಹೇಳುವಂತೆ ಕುಟುಂಬಸಮೇತ ನೋಡಬಹುದಾದ ಸನ್ನಿವೇಶಗಳು ಇರಲಿದೆ. ಹಳ್ಳಿಯಲ್ಲಿ ಎರಡು ಕುಟುಂಬಗಳ ಮಧ್ಯೆ ನಡೆಯುವ ವಾದ ವಿವಾದಗಳು. ಒಂದೇ ಊರಿನವರು ಪ್ರೀತಿಯಲ್ಲಿ ಬಿದ್ದಾಗ, ಹಿರಿಯರಿಂದ ಪರ ವಿರೋಧ ಚರ್ಚೆಗಳು ನಡೆಯುತ್ತವೆ. ಕೊನೆಗೆ ಏನೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದನ್ನು ಹಾರರ್, ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಮಂಡ್ಯ, ಮೈಸೂರು, ಬನ್ನೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದನ್ನು ಒಪ್ಪಿಸಿಕೊಳ್ಳಬೇಕೆಂದು ಮಂಡ್ಯನಾಗರಾಜ್ ಕೋರಿದರು.

 

       ಜನಾರ್ಧನ್ ನಾಯಕನಾಗಿ ಹೊಸ ಅವಕಾಶ. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾನಾಗಣ್ಣ ಇದರ ಮೂಲಕ ನಾಯಕಿಯಾಗಿ ಬಡ್ತಿ ಹೊಂದಿದ್ದಾರೆ. ಖಳನಾಗಿ ಭೀಮಣ್ಣನಾಯಕ, ಉಪನಾಯಕಿಯಾಗಿ ಹರಿಣಿನಟರಾಜ್ ಉಳಿದಂತೆ ಅಪೂರ್ವ, ನಿತ್ಯ, ಶಂಕರಣ್ಣ, ರಂಗಸ್ವಾಮಿ, ಹನುಮನಗೌಡ, ಜಗನ್ನಾಥಶೆಟ್ಟಿ, ಶಂಕರೆಗೌಡ ಮುಂತಾದವರು ಅಭಿನಯಿಸಿದ್ದಾರೆ.

     ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜೆ.ಕುಮಾರ್, ಐವತ್ತು ವರ್ಷಗಳಿಂದ ಚಿತ್ರರಂಗವನ್ನು ನೋಡುತ್ತಾ ಬಂದಿದ್ದೇನೆ. ಮಂಡ್ಯ ಸೊಗಡು ತುಣುಕುಗಳಲ್ಲಿ ಕಾಣಿಸುತ್ತದೆ. ಇಪ್ಪತ್ತೈದು ವರ್ಷಗಳಿಂದ ನಾಗರಾಜ್ ಅವರು ಬಣ್ಣದಲೋಕದಲ್ಲಿ ಇರುವುದರಿಂದ ಒಳ್ಳೆ ಚಿತ್ರ ಮಾಡಿರುತ್ತಾರೆ. ಇಂತಹ ಸಣ್ಣ ಬಜೆಟ್ ಸಿನಿಮಾಗಳು ಗೆಲ್ಲಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಅಂತ ಹರಿಸಿದರು.

 

      ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಮಾತನಾಡಿ ನಾಗರಾಜ್ ಅವರು ಮೂರು ದಶಕಗಳಿಂದ ಪರಿಚಿತರು. ಅಂದಿನಿಂದ ಇಲ್ಲಿಯವರೆಗೂ ಒಂಚೂರು ಬದಲಾವಣೆ ಕಂಡಿಲ್ಲ. ಸಿನಿಮಾ ಓಡುತ್ತೋ ಇಲ್ಲವೋ, ಜನರು ಗೆಲ್ಲಿಸುತ್ತಾರೋ ಎಂಬುದನ್ನು ನೋಡದೆ ನಿರಂತರವಾಗಿ ಚಿತ್ರಗಳನ್ನು ಮಾಡುತ್ತಾ ಬಂದವರು. ಕೆಲವರು ಚಿತ್ರವನ್ನು ಉದ್ದೇಶಕ್ಕೋಸ್ಕರ ಮಾಡುತ್ತಾರೆ. ಆದರೆ ಇವರು ಯಾವುದೇ ಸ್ವಾರ್ಥ ಇಲ್ಲದೆ ನಿರ್ಮಿಸುತ್ತಾರೆ. ಇದು ಖುಷಿ ಪಡುವ ವಿಷಯ. ಶೀರ್ಷಿಕೆ ನೋಡಿದಾಗ ಶಂಕರ್‌ನಾಗ್ ಅಭಿನಯದ ’ಸಿಬಿಐ ಶಂಕರ್’ ನೆನಪಿಗೆ ಬರುತ್ತದೆ. ನಾವು ಅಂದು ಹೆಜ್ಜೆ ಇಟ್ಟವರು. ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲದೆ ನಿರ್ದೇಶಕರ ಸಂಘದ ಉಪಸಮಿತಿ ಸದಸ್ಯರು. ಆದ್ದರಿಂದ ಎಲ್ಲಾ ವರ್ಗಗಳಿಂದ ಪ್ರೋತ್ಸಾಹ ಸಿಗಬೇಕೆಂದು ಅಭಿಪ್ರಾಯಪಟ್ಟರು.

 

       ಸಂಗೀತ ಕುಮಾರಸ್ವಾಮಿ, ಛಾಯಾಗ್ರಹಣ-ಸಂಕಲನ ವರ್ಷಿತ್.ಎಸ್.ಎನ್, ಕಲೆ ಶಂಕರ್ ಅವರದಾಗಿದೆ. ಅಂದಹಾಗೆ ಚಿತ್ರವು ಏಪ್ರಿಲ್ ತಿಂಗಳು ತೆರೆ ಕಾಣುವ ಸಾಧ್ಯತೆ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,