Bharti Teacher.News

Saturday, March 22, 2025

27

 

*ಕನ್ನಡ ಕಾಳಜಿ ಸಾರುವ ಭಾರತಿ ಟೀಚರ್ ಏಳನೇ ತರಗತಿ*

 

       ಹೆಸರಿನಲ್ಲೇ ಆಕರ್ಷಣೆ, ಕುತೂಹಲ ಹುಟ್ಟಿಸುವ *ಭಾರತಿ ಟೀಚರ್ ಏಳನೇ ತರಗತಿ* ಚಿತ್ರದ ಟೀಸರ್ ಬಿಡುಗಡೆ ಸಮಾರಂಭವು ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಸಿರಗುಪ್ಪ ಮೂಲದ *ಉದ್ಯಮಿ ರಾಘವೇಂದ್ರ ರೆಡ್ಡಿ* ಅವರು ಪೂಜ್ಯಾಯ ಫಿಲಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ.  ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ, ಸಂಗೀತ ಮತ್ತು *ನಿರ್ದೇಶನವನ್ನು ಎಂ.ಎಲ್.ಪ್ರಸನ್ನ* ನಿರ್ವಹಿಸಿದ್ದಾರೆ. ಕ್ರಿಷಿ ಸಂಸ್ಥೆಯ *ವೆಂಕಟ್‌ಗೌಡ ಕ್ರಿಯೇಟೀವ್ ಹೆಡ್* ಆಗಿರುತ್ತಾರೆ.

 

      ಶಿಕ್ಷಕರಾಗಿ ಸಿಹಿಕಹಿಚಂದ್ರು, *ಟೈಟಲ್ ರೋಲ್‌ದಲ್ಲಿ ಕು.ಯಶಿಕಾ*, ಗೋವಿಂದೇಗೌಡ, ಅಶ್ವಿನ್‌ಹಾಸನ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ ಅಂಚನ್, ಬೆನಕಾ ನಂಜಪ್ಪ, ರೋಹಿತ್‌ರಾಘವೇಂದ್ರ, ಸೌಜನ್ಯಸುನಿಲ್, ಎಂ.ಜೆ.ರಂಗಸ್ವಾಮಿ ಮುಂತಾದವರು ನಟಿಸಿದ್ದಾರೆ. ಹಾಗೂ ಜಿಲ್ಲಾಧಿಕಾರಿ ಪಾತ್ರದಲ್ಲಿ ಹಾಲಿ ಕಾರ್ಮಿಕ ಸಚಿವರಾಗಿರುವ ಸಂತೋಷ್.ಎಸ್.ಲಾಡ್ ಬಣ್ಣ ಹಚ್ಚುತ್ತಿದ್ದು, ಇಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು  ವಿಶೇಷ. ಛಾಯಾಗ್ರಹಣ ಎಂ.ಬಿ.ಹಳ್ಳಿಕಟ್ಟಿ, ಸಂಕಲನ ಸುಜಿತ್‌ನಾಯಕ್, ವಾದ್ಯ ಸಂಯೋಜನೆ ಕೆ.ಎಂ.ಇಂದ್ರ, ನೃತ್ಯ ಕಂಬಿರಾಜ್, ಕಾರ್ಯಕಾರಿ ನಿರ್ಮಾಪಕ ರಾಘವ್‌ಸೂರ್ಯ-ದರ್ಶನ್‌ಗೌಡ ಅವರದಾಗಿದೆ.

       ನಿರ್ದೇಶಕರು ಮಾತನಾಡಿ ಸಂತೋಷ್ ಸರ್ ಮೊದಲು ಉದ್ಯಮಿ, ಚಿತ್ರಗಳಿಗೆ ನೆರವಾದವರು. ಈಗ ಸಚಿವರಾಗಿದ್ದು ನಮ್ಮ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿದ್ದು ಹೆಗ್ಗಳಿಕೆ. ಇದಕ್ಕೆ ಅನುವು ಮಾಡಿಕೊಟ್ಟಿದ್ದು ಡಾ.ವಿ.ನಾಗೇಂದ್ರಪಸಾದ್. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಈ ತಲೆಮಾರಿನ ಮಕ್ಕಳಲ್ಲಿ ಕಲಿಯುವ ಮತ್ತು ಕಲಿಸುವ ಕಿಚ್ಚನ್ನು ಹುಟ್ಟಿ ಹಾಕಬೇಕು. ಇಂತಹ ಸಾತ್ವಿಕ ಆಶಯಕ್ಕೆ ಸಾರ್ವಜನಿಕರ ಬೆಂಬಲ ಅವಶ್ಯಕವಾಗಿದೆ. ಅದಕ್ಕಿಂತ ಹಚ್ಚಾಗಿ ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧ್ಯ ಆಗುತ್ತೆ. ಭಾರತಿ ಎನ್ನುವಂತಹ ಏಳನೇ ತರಗತಿ ವಿದ್ಯಾರ್ಥಿಗೆ ತನ್ನ ಊರಿನ ಪ್ರತಿಯೊಬ್ಬರು ಕನ್ನಡ ಓದಬೇಕು, ಬರಿಬೇಕು ಎನ್ನುವ ಕನಸನ್ನು ಹೊತ್ತುಕೊಂಡಿರುತ್ತಾಳೆ. ಇದಕ್ಕೆ ಮೇಷ್ಟ್ರು ಧೈರ್ಯ ತುಂಬುತ್ತಾರೆ. ಇದನ್ನು ಸಾಧಿಸುವ ಹೊತ್ತಿನಲ್ಲಿ ಅನುಭsವಿಸುವಂತಹ ನೋವು, ನಲಿವು, ಉತ್ಸಾಹ, ಪ್ರಯತ್ನ, ಇದೆಲ್ಲಾದರ ಮಧ್ಯೆ ವ್ಯವಸ್ಥೆಯನ್ನು ಬಳಸಿಕೊಳ್ಳಲು ಯೋಚನೆ ಮಾಡುತ್ತಾಳೆ. ಕೊನೆಗೆ ಭಾರತಿ ಟೀಚರ್ ಆಗಿ ಹೇಗೆ ಬದಲಾಗುತ್ತಾಳೆ ಎಂಬುದು ಸಿನಿಮಾದ ಸಾರಾಂಶ. ಅಂತಿಮ ಹಂತದ ಚಿತ್ರೀಕರಣ ಬಾಕಿ ಇದೆ. ಸದ್ಯದಲ್ಲೆ ಅದನ್ನು ಮುಗಿಸಲು ಸಿದ್ದತೆಗಳು ನಡೆಯುತ್ತಿದೆ ಎಂದು *ಎಂ.ಎಲ್.ಪ್ರಸನ್ನ ಮಾಹಿತಿ ನೀಡಿದರು*.

 

       ಈ ಸಿನಿಮಾದ ಕುರಿತು ಮಾತನಾಡಿದ *ಸಂತೋಷ್.ಎಸ್.ಲಾಡ್ *ಚಿತ್ರದ ಸಾರಾಂಶ ಇಷ್ಟವಾಯಿತು. ನನಗೆ ಡಿಸಿ ಪಾತ್ರ ಮಾಡಬೇಕೆಂದು ಕೇಳಿಕೊಂಡಿರುತ್ತಾರೆ. ರಾಜಕಾರಣ ಬೇರೆ ಸಂದರ್ಭದಲ್ಲಿ ಮಾತನಾಡೋಣ. ಆದರೆ ನಿರ್ದೇಶಕರೊಂದಿಗೆ ಇಲ್ಲಿ ಕೆಲಸ ಮಾಡುವುದು ಇಷ್ಟವಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂಬ ನಂಬಿಕೆಯ ಜತೆ ಭಯ ಕೂಡ ಇದೆ. ಇದು ಒಂದು ಒಳ್ಳೆಯ ಸಂದೇಶ ಇರುವ ಚಿತ್ರವಾಗಿದ್ದರಿಂದ, ಅದೃಷ್ಟ ಅಂತ ಭಾವಿಸಿದ್ದೇನೆ. ಸಿಹಿಕಹಿ ಚಂದ್ರು ಅವರ ಹಳೆಯ ಚಿತ್ರಗಳನ್ನು ನೋಡಿ ಬೆಳೆದವನು. ಈಗಿನ ಕಾಲದಲ್ಲಿ ಸಿನಿಮಾಗಳು ಗೆಲ್ಲುವುದು ಬಹಳ ಕಷ್ಟಕರವಾಗಿದೆ. ಜಗತ್ತಿನ ಎಲ್ಲಾ ಕಡೆಯಲ್ಲೂ ಹೇಳಿದ ಹಾಗೆ ಶೇಕಡ 8ರಷ್ಟು ಯಶಸ್ಸು ಕಾಣುತ್ತಿದೆ.  ಕನ್ನಡ ಸಿನಿಮಾಗಳು ಹೆಚ್ಚಿಗೆ ಬೆಳೀಲಿ. ಚಿತ್ರರಂಗಕ್ಕೆ ಒಳ್ಳೆಯ ಪಯಣ ಇದೆ. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಪುಟ್ಟಣ್ಣಕಣಗಾಲ್ ಅವರನ್ನು ನೋಡಿರತಕ್ಕಂತ ಉದ್ಯಮ. ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಭಾಷೆಯ ಚಿತ್ರಗಳು ಗುರುತಿಸಿಕೊಳ್ಳುತ್ತಿದೆ. ಹೆಚ್ಚಿನ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಬರಬೇಕೆಂದು ಸಚಿವ ಸಂತೋಷ್.ಎಸ್.ಲಾಡ್ ತಂಡಕ್ಕೆ ಶುಭ ಹಾರೈಸಿದರು.

 

       ಡಾ.ವಿ.ನಾಗೇಂದ್ರಪ್ರಸಾದ್, ವೆಂಕಟ್‌ಗೌಡ, ಸಿಹಿಕಹಿಚಂದ್ರು, ರಾಘವೇಂದ್ರರೆಡ್ಡಿ, ಕು.ಯಶಿಕಾ ಮುಂತಾದವರು ಸಂತಸ ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,