45 Film Teaser Launch.News

Sunday, March 30, 2025

33

 

*ಕುತೂಹಲ ಮೂಡಿಸಿದೆ ಬಹು ನಿರೀಕ್ಷಿತ ’45" ಚಿತ್ರದ ಟೀಸರ್* .

 

 *ಯುಗಾದಿ ಹಬ್ಬದಂದು ಬಿಡುಗಡೆಯಾಯಿತು ಈ ಮಲ್ಟಿಸ್ಟಾರರ್ ಸಿನಿಮಾದ ಮನಮುಟ್ಟುವ ಟೀಸರ್* .

 

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ರಮೇಶ್ ರೆಡ್ಡಿ ನಿರ್ಮಾಣದ, ಅರ್ಜುನ್ ಜನ್ಯ ನಿರ್ದೇಶನದ ಹಾಗೂ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ  ಅಭಿನಯದ ಬಹುನಿರೀಕ್ಷಿತ "45" ಚಿತ್ರದ ಟೀಸರ್ ಯುಗಾದಿ ಹಬ್ಬದ ಶುಭದಿನದಂದು ಬಿಡುಗಡೆಯಾಯಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಟೀಸರ್ ಅನಾವರಣ ಮಾಡಿದರು.  ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಟೀಸರ್ ಬಿಡುಗಡೆ ನಂತರ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. 

 

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಡಿ.ಕೆ.ಡಿ ರಿಯಾಲಿಟಿ ಶೋ ಮಾಡುತ್ತಿದ್ದ ಸಮಯದಲ್ಲಿ ಅರ್ಜುನ್ ಜನ್ಯ 4 ರಿಂದ 5 ನಿಮಿಷದಲ್ಲಿ ಈ ಚಿತ್ರದ ಕಥೆ ಹೇಳಿದರು. ಕಥೆ ಕೇಳಿ ಥ್ರಿಲ್ ಆದೆ. ಕಥೆ ಕೊಟ್ಟು ಬಿಡುತ್ತೇನೆ ಯಾರಾದರೂ ನಿರ್ದೇಶನ ಮಾಡಲಿ ಎಂದು ಅರ್ಜುನ್ ಜನ್ಯ ಹೇಳಿದರು. ನೀವು ಕಥೆ ಚೆನ್ನಾಗಿ ಹೇಳಿದ್ದೀರಾ.  ನೀವೇ ನಿರ್ದೇಶನ ಮಾಡಿ ಅಂದೆ. ನಂತರ ನಿರ್ಮಾಣಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ಮುಂದಾದರು. "ಪ್ರೀತ್ಸೆ", "ಲವ ಕುಶ" ಚಿತ್ರಗಳಲ್ಲಿ ನಟ ಉಪೇಂದ್ರ ಜೊತೆ ನಟಿಸಿದ್ದೆ.  ಈಗ ಮತ್ತೆ ಅವರೊಂದಿಗೆ ಅಭಿನಯಿಸಿದ್ದೇನೆ. ರಾಜ್ ಬಿ ಶೆಟ್ಟಿ ಅವರ ಜೊತೆಗೆ ಇದು ಮೊದಲ ಚಿತ್ರ. ಎಲ್ಲಾ ಕಲಾವಿದ ಹಾಗೂ ತಂತ್ರಜ್ಞರ ಕಾರ್ಯವೈಖರಿ ತುಂಬಾ ಚೆನ್ನಾಗಿದೆ. ಟೀಸರ್ ನಲ್ಲೇ ಅರ್ಜುನ್ ಜನ್ಯ ಬಹಳ ಕುತೂಹಲ ಮೂಡಿಸಿದ್ದಾರೆ.  ಚಿತ್ರ ಕೂಡ ಬಹಳ ಚೆನ್ನಾಗಿರುತ್ತದೆ ಎಂಬ ಭರವಸೆ ಇದೆ. "45" ಚಿತ್ರ ಬರೀ ಕರ್ನಾಟಕದಲ್ಲಿ ಮಾತ್ರವಲ್ಲ. ಭಾರತದಾದ್ಯಂತ ಹೆಸರು ಮಾಡುವ ಚಿತ್ರವಾಗಲಿದೆ.  ಈ ಚಿತ್ರವನ್ನು ಬೇರೆಯವರು ನಿರ್ದೇಶನ ಮಾಡಿದ್ದರೆ ಕನ್ನಡಕ್ಕೆ ಸಿಗುತ್ತಿದ್ದ ಒಳ್ಳೆಯ ನಿರ್ದೇಶಕನನ್ನು ಕಳೆದುಕೊಳ್ಳುತ್ತಿದ್ದೆವು ಎಂದರು.

ನಟ ಉಪೇಂದ್ರ ಮಾತನಾಡಿ, ಒಳ್ಳೆಯ ಕಥೆ ನೀವೇ ಮಾಡಿ ಎಂದು ಅರ್ಜುನ್ ಜನ್ಯಗೆ ಶಿವಣ್ಣ ಅವರು ಹೇಳಿದ್ದರ ಫಲ 45 ಚಿತ್ರ. ನಮ್ಮಲ್ಲಿಯೂ ಉತ್ತಮ ನಿರ್ದೇಶಕರು ಇದ್ದಾರೆ ಎನ್ನುವುದನ್ನು ನಾನೂ ಏನೂ ಮಾಡದಿದ್ದಾಗ ಹೇಳಿದವರು ಶಿವಣ್ಣ. ಅವರಿಂದ ಎಷ್ಟು ಜನ ನಿರ್ದೇಶಕರು ಬಂದಿದ್ಧಾರೆ. ಕೆಲವರು ಸೂಪರ್ ಸ್ಟಾರ್ ಆಗಿದ್ದಾರೆ. ಶಿವಣ್ಣ ಅಪರಂಜಿ. ಅರ್ಜುನ್ ಜನ್ಯ ಸಂಗೀತದಲ್ಲಿ ಸಿನಿಮಾ ಸೂಪರ್ ಹಿಟ್ ಮಾಡ್ತಾರೆ. ಇನ್ನೂ ಸಿನಿಮಾ ನಿರ್ದೇಶನ ಹೇಗೆ ಮಾಡಿರಬೇಕು ಊಹಿಸಿ ನೋಡಿ. ಅರ್ಜುನ್ ಜನ್ಯ ಅವರು ಬರೀ ಸಂಗೀತ ನಿರ್ದೇಶಕ ಮತ್ತು ನಿರ್ದೇಶಕ ಮಾತ್ರ ಅಲ್ಲ. ಒಳ್ಳೆಯ ನಟ ಕೂಡ.‌ ಪ್ರತಿಯೊಬ್ಬ ಕಲಾವಿದರಿಗೂ ಹೇಗೆ ನಟಿಸಬೇಕೆಂದು ಅವರು ಹೇಳುತ್ತಿರಲಿಲ್ಲ. ನಟಿಸಿ ತೋರಿಸುತ್ತಿದ್ದರು. ಇನ್ನೂ ಚಿತ್ರರಂಗಕ್ಕೆ ರಮೇಶ್ ರೆಡ್ಡಿ ಅವರಂತಹ ನಿರ್ಮಾಪಕರು ಬೇಕಾಗಿದ್ದಾರೆ. ಈ ಸಿನಿಮಾ ಖಂಡಿತಾ ಯಶಸ್ವಿಯಾಗುತ್ತದೆ. ಆದರೆ ರಾಜ್ ಬಿ ಶೆಟ್ಟಿ ಅವರು ಹೇಳಿದ ಹಾಗೆ ಮುಂದಿನ ಸಿನಿಮಾವನ್ನು ಅರ್ಜುನ್ ಜನ್ಯ ಅವರು ಇಲ್ಲೇ ಮಾಡಬೇಕು‌ ಎಂದರು.

 

ಈ ಚಿತ್ರದಲ್ಲಿ ಶಿವಣ್ಣ ಮತ್ತು ಉಪೇಂದ್ರ ಎನ್ನುವ ಇಬ್ಬರು ಸೂಪರ್ ಸ್ಟಾರ್ ಇದ್ದಾರೆ. ಚಿತ್ರದಲ್ಲಿ ನಾನೊಬ್ಬ ಕಲಾವಿದ ಅಷ್ಟೇ. ಶಿವಣ್ಣ ಮತ್ತು ಉಪೇಂದ್ರ ಅವರು ತೆರೆಯ ಮೇಲೆ ಬರವಾಗ ಅವರ ಮದ್ಯೆ ಕುಳಿತು ವಿಷಲ್ ಹಾಕುವುದು ನನ್ನ ಭಾಗ್ಯ. ಚಿತ್ರದಲ್ಲಿ ನಟಿಸಿ ಎಂದಾಗ ಅದರಿಂದ ತಪ್ಪಿಸಿಕೊಳ್ಳಲು ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ಕನ್ವಿನ್ಸ್ ಮಾಡಿದೆ. ಬೇರೆ  ಯಾರನಾದರೂ ಹಾಕಿಕೊಳ್ಳಿ ಎಂದು ಕೇಳಿಕೊಂಡೆ. ನನ್ನನ್ನು ಒಪ್ಪಿಕೊಂಡಿದ್ದು ನನ್ನ ಭಾಗ್ಯ. ಒಳ್ಳೆಯ ಕನ್ನಡ ಸಿನಿಮಾವನ್ನು ಕನ್ನಡದವರ ಜೊತೆಗೆ  ಹೊರಗಿನ ಮಂದಿಯೂ ನೋಡಬೇಕು ಎನ್ನುವ ಆಸೆ ನನ್ನದು. ಅರ್ಜುನ್ ಜನ್ಯ ಅವರು ಮುಂದಿನ ಸಿನಿಮಾ ಬೇರೆ ಭಾಷೆಯಲ್ಲಿ ನಿರ್ದೇಶನ ಮಾಡದ್ದೆ, ಕನ್ನಡದಲ್ಲಿಯೇ ಮಾಡಬೇಕು. ಅರ್ಜುನ್ ಜನ್ಯ ಅವರ ನಿರ್ದೇಶನದ ವೈಖರಿ ನಿಜಕ್ಕೂ ಶ್ಲಾಘನೀಯ. ಚಿತ್ರದಲ್ಲಿರುವ ಪ್ರತಿ ಪಾತ್ರಕ್ಕೂ ಡಬ್ ಮಾಡಿ ಇದೇ ರೀತಿ ಬರಬೇಕು ಎಂದು ತೋರಿಸುತ್ತಿದ್ದರು‌. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ.  ನಾನು ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಅನಿಸಲಿಲ್ಲ. ಚೆನ್ನಾಗಿ ನಟಿಸಲು ಪ್ರೋತ್ಸಾಹಿಸಿದವರು ಶಿವಣ್ಣ ಮತ್ತು ಉಪೇಂದ್ರ ಅವರು ಎಂದು ನಟ ರಾಜ್ ಬಿ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

 

ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಈ ಚಿತ್ರ ಆಗಲು ಮುಖ್ಯ ಕಾರಣ ಶಿವಣ್ಣ. ಸಿನಿಮಾ ನಾವು ಅಂದು ಕೊಂಡ ಹಾಗೆ ಬರಲು ಕಾರಣ ನಿರ್ಮಾಪಕ ರಮೇಶ್ ರೆಡ್ಡಿ. ಅವರು ದುಡ್ಡಿನ ಮುಖ ನೋಡಿಲ್ಲ. ಚಿತ್ರ ಚೆನ್ನಾಗಿ ಮೂಡಿಬರಬೇಕೆಂಬ ಆಸೆ ಅಷ್ಟೇ ಅವರಿಗೆ.  "45" ಎನ್ನುವ ಶೀರ್ಷಿಕೆಯನ್ನು ಸುಮ್ಮನೆ ಇಟ್ಟಿಲ್ಲ. ಚಿತ್ರದ ಟೀಸರ್ ನಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದೇವೆ. ಅದು ಏನು ಎನ್ನುವುದನ್ನು ಪ್ರೇಕ್ಷಕರೇ ಗೆಸ್ ಮಾಡಲಿ. ಚಿತ್ರದಲ್ಲಿ ಗ್ರಾಫಿಕ್ ಕೆಲಸ ಹೆಚ್ಚಿಗೆ ಇದ್ದು ಕೆನಡಾದಲ್ಲಿ ಪರಿಣಿತ ತಂತ್ರಜ್ಞರ ತಂಡದಿಂದ ಸಿಜಿ ಕೆಲಸ ನಡೆಯುತ್ತಿದೆ. ಆಗಸ್ಟ್ 15 ಚಿತ್ರ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಮತ್ತೊಂದು ಟೀಸರ್, ಹಾಡುಗಳು ಹಾಗೂ ಟ್ರೇಲರ್ ಅನ್ನು ವಿಭಿನ್ನವಾಗಿ ಅನಾವರಣ ಮಾಡುವ ಯೋಚನೆ ಇದೆ. ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರು ಸೇರಿದಂತೆ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬರುತ್ತಿದೆ. ಚಿತ್ರದಲ್ಲಿ "ಓಂ" ಚಿತ್ರದ ಬಗ್ಗೆ ಬಳಸಲು ಅವಕಾಶ ಮಾಡಿಕೊಟ್ಟ ಉಪೇಂದ್ರ ಅವರಿಗೆ, ಅದಕ್ಕೆ ಸಹಕಾರ ನೀಡಿದ ಶಿವಣ್ಣ ಅವರಿಗೆ ಹಾಗೂ ಜೊತೆಗೆ ಹಂಸಲೇಖ ಅವರಿಗೆ ನಾನು ಅಬಾರಿ ಎಂದರು.

 

ಹಬ್ಬದ ದಿನವೂ ನಮ್ಮ ಚಿತ್ರದ ಟೀಸರ್ ಬಿಡುಗಡೆಗೆ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ, ಚಿತ್ರ ಮೂಡಿ ಬಂದಿರುವ ಪರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನನಗೆ ತಿಳಿದ ಹಾಗೆ ಈ ರೀತಿಯ ಸಿನಿಮಾ ಭಾರತದಲ್ಲಿಯೇ ಈವರೆಗೂ ಬಂದಿಲ್ಲ. ಮೊದಲಿನಿಂದಲೂ ನಮ್ಮ ಚಿತ್ರಕ್ಕೆ ನೀವೆಲ್ಲಾ ನೀಡುತ್ತಾ ಬಂದಿರುವ ಪ್ರೋತ್ಸಾಹ ಮುಂದೆಯೂ ಮುಂದುವರೆಯಲಿ ಎಂದರು.

 

ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ಮ್ಯಾಜಿಕಲ್ ಕಂಪೋಸರ್ ಈಗ ಮ್ಯಾಜಿಕಲ್ ನಿರ್ದೇಶಕರಾಗಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಟೀಸರ್ ಮೂಲಕ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ನಿರ್ದೇಶಕರ ವಿಷನ್ ನಿರ್ಮಾಪಕ ಫ್ಯಾಶನ್ ನಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು.

 

ನಿರ್ಮಾಪಕ ಕೆ.ಮಂಜು, ಸಂಜಯ್ ಗೌಡ, ಇಂದ್ರಜಿತ್ ಲಂಕೇಶ್, ಕೆ.ವಿ.ಎನ್ ಸುಪ್ರೀತ್, ಆನಂದ್ ಆಡಿಯೋ ಶ್ಯಾಮ್ , ಶ್ರೇಯಸ್ ಮಂಜು ಮುಂತಾದವರು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,