Puneeth Nivasa.News

Wednesday, April 02, 2025

49

 

ಪುನೀತ್ ನಿವಾಸ ಟ್ರೈಲರ್ ಬಿಡುಗಡೆ

 

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಅವರ ಆದರ್ಶ, ವ್ಯಕ್ತಿತ್ವವನ್ನು ಪರಿಚಯಿಸುವಂಥ ಅನೇಕ ಚಲನಚಿತ್ರಗಳು ಕನ್ನಡದಲ್ಲಿ ನಿರ್ಮಾಣವಾಗಿವೆ. ಅಂಥಾ ಮತ್ತೊಂದು ಚಿತ್ರವೇ ಪುನೀತ್ ನಿವಾಸ. ಪುಟ್ಟಣ್ಣ ಕಣಗಾಲ್‌ರಂಥ ಹಿರಿಯ ನಿರ್ದೇಶಕರಿಗೆ ಸಹಾಯಕರಾಗಿದ್ದ  ನಾಗೇಂದ್ರ ಪ್ರಸಾದ್  ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀಪಂಚಮಿ ಸಿನಿ ಕ್ರಿಯೇಷನ್ಸ್ ಮೂಲಕ ಎಸ್.ಮೋಹನ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕನ್ನಡ ರಾಜು ಅವರು ಇಡೀ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್‌ನ್ನು ರಾಜ್ ಕುಟುಂಬದ ಆಪ್ತರಾದ ಗ್ರೀನ್‌ ಹೌಸ್ ವಾಸು ಅವರು  ಬಿಡುಗಡೆಗೊಳಿಸಿ  ಮಾತನಾಡುತ್ತ ಈ ಚಿತ್ರದ ಮೂಲಕ ಏನೋ ಒಂದು  ಹೇಳಲು ಹೊರಟಿದ್ದಾರೆ. ಸಾಮಾನ್ಯರೂ ಅಸಾಮಾನ್ಯರಾಗಬಹುದು ಅನ್ನೋದು ಇದರಲ್ಲಿ ಕಾಣುತ್ತಿದೆ ಎಂದರು.

   ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಮಲ್ಲು ಎಂಬ ಹುಡುಗನ ಕಥೆಯಿದು. ಒಂದು ಸಿನಿಮಾ ಮಾಡಬೇಕೆಂದು ಹೊರಟ ಆತ  ಕೊನೆಗೂ ಆ ಸಿನಿಮಾ ಮಾಡಿದನೇ, ಇಲ್ಲವೇ, ಪುನೀತ್‌ರ  ಆದರ್ಶಗಳನ್ನು ಆತ ಹೇಗೆ ಪಾಲಿಸುತ್ತಾನೆ ಎಂಬುದನ್ನು  ಈ ಚಿತ್ರದ ಮೂಲಕ ನಿರ್ದೇಶಕ ನಾಗೇಂದ್ರ ಪ್ರಸಾದ್ ಹೇಳಹೊರಟಿದ್ದಾರೆ.

   ವೇದಿಕೆಯಲ್ಲಿ ನಿರ್ಮಾಪಕ ಎಸ್. ಮೋಹನ್ ಮಾತನಾಡುತ್ತ ನನಗೆ ಚಿಕ್ಕ ವಯಸಿನಿಂದಲೇ ಸಿನಿಮಾ ಹುಚ್ಚು, ಹಾಗೇ ಸಿನಿಮಾ ನೋಡ್ತಾ ರಾಜ್‌ಕುಮಾರ್, ಪುನೀತ್ ಅವರ ಆದರ್ಶಗಳೇ ನನಗೆ ಪ್ರೇರಣೆಯಾದವು, 2021ರಲ್ಲಿ ನಾನು ಈ ಟೈಟಲ್ ರಿಜಿಸ್ಟರ್ ಮಾಡಿಸಿದೆ, ಇದಕ್ಕೆ ತಕ್ಕಂತೆ 50 ಕಥೆಗಳನ್ನು ಮಾಡಿದೆ, ಆದರೆ ಯಾವುದೂ ಸರಿಹೊಂದಲಿಲ್ಲ, ಕೊನೆಗೆ ಈ ಕಥೆಯನ್ನು ಚಿತ್ರರೂಪಕ್ಕೆ ತಂದಿದ್ದೇವೆ, ಪುನೀತ್ ನಿವಾಸದ ಒಳಗೆ ಬಂದಾಗ ಅಲ್ಲಿ ಪುನೀತ್ ಅವರೇ ಕಾಣಿಸುತ್ತಾರೆ. ಸಿನಿಮಾ ಮಾಡಬೇಕೆಂದು ಹಣ ಕೂಡಿಟ್ಟುಕೊಂಡಿದ್ದ ಒಬ್ಬ ಬಡ ಹುಡುಗ ಕೊನೆಗೆ ತನ್ನ ಕನಸಿನ  ಸಿನಿಮಾವನ್ನು ಹೇಗೆ ನಿರ್ಮಿಸುತ್ತಾನೆ ಅನ್ನೋದೇ ಚಿತ್ರದ ಕಥಾಹಂದರ, ಚಿತ್ರಕ್ಕಾಗಿ ಕೆಲವು ದೃಶ್ಯಗಳನ್ನು ನಾನು, ನಮ್ಮ ನಿರ್ದೇಶಕರು ಸೇರಿ ಶೂಟಿಂಗ್  ಸೆಟ್‌ನಲ್ಲೇ ರೆಡಿ ಮಾಡಿಕೊಂಡೆವು. ಇದಕ್ಕೆ ನಿರ್ದೇಶಕರೂ ಸಹ ಸಾಥ್ ಕೊಟ್ಟರು ಎಂದು ಹೇಳಿದರು,

  ನಂತರ ನಿರ್ದೇಶಕ ನಾಗೇಂದ್ರ ಪ್ರಸಾದ್ ಮಾತನಾಡುತ್ತ ಈ ಸಿನಿಮಾ ಮೋಹನ್ ಅವರ ಕನಸು, ಪುನೀತ್ ಅಭಿಮಾನಿಯೊಬ್ಬನ ಕಥೆಯಿದು. ಪುನೀತ್‌ನಿವಾಸದ ಒಳಗೆ ಬಂದಾಗ ಅಲ್ಲಿ ಪುನೀತ್ ಕಾಣಿಸ್ತಾರೆ.  ಅವರು ಹೇಗೆ ಕಾಣಿಸುತ್ತಾರೆ ಅನ್ನೋದೇ  ಕುತೂಹಲ. ಚಿತ್ರ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಎಂದರು, 

 ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅಭಿಜಿತ್ ಮಾತನಾಡುತ್ತ ಈ ಟೈಟಲ್‌ಗೆ ದೊಡ್ಡ ಪವರ್ ಇದೆ, ಟೈಟಲ್ ಹೇಳಿದಾಗ ನನಗೂ ರೋಮಾಂಚನವಾಗಿ, ಮರುಮಾತಾಡದೆ ಒಪ್ಪಿಕೊಂಡೆ. ನಾನು ಪುನೀತ್ ಅವರ ಜತೆ ಆ್ಯಕ್ಟ್ ಮಾಡಬೇಕೆಂದುಕೊಂಡಿದ್ದೆ. ಆಗಿರಲಿಲ್ಲ. ಈಗ ಅವರ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದೇನೆ, ನಿರ್ಮಾಪಕ ಮೋಹನ್ ಅವರು ಪುನೀತ್‌ರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದಾರೆ.  ಚಿತ್ರಕ್ಕಾಗಿ ಒಂದು ನಿಜವಾದ ಮನೆಯನ್ನೇ ಕಟ್ಟಿಸಿದ್ದಾರೆ  ಎಂದು ಹೇಳಿದರು.

    ಸಂಗೀತ ನಿರ್ದೇಶಕ ಎಂ.ಎನ್. ಕೃಪಾಕರ್ ಮಾತನಾಡುತ್ತ ಆರಂಭದಲ್ಲಿ ಒಂದೇ ಹಾಡು ಮಾಡಬೇಕೆಂದಿತ್ತು, ನಂತರ ಅದು ನಾಲ್ಕಾಯ್ತು, ತಾಯಿ ಸಾಂಗನ್ನು ಅಭಿಜಿತ್ ಅವರೇ ಹಾಡಿದ್ದಾರೆ ಎಂದು ಹೇಳಿದರು. ಹಿರಿಯ ನಿರ್ಮಾಪಕ ಕರಿಸುಬ್ಬು ಮಾತನಾಡಿ ಮೋಹನ್ ನನಗೆ ಹಳೇ ಪರಿಚಯ, ಪುನೀತ್ ನಿವಾಸದ ಕಥೆ ಹೇಳುವ ನಿರ್ಮಾಪಕನ ಪಾತ್ರ ನನ್ನದು ಎಂದರು, ಮಲ್ಲು ಪಾತ್ರದಲ್ಲಿ ಮಾಸ್ಟರ್ ವಿಠ್ಠಲ್ ಕಾಣಿಸಿಕೊಂಡಿದ್ದಾರೆ, ಹಿರಿಯನಟ ಶಂಕರ್ ಭಟ್, ಗಂಡಸಿ ಸದಾನಂದಸ್ವಾಮಿ, ಶ್ರೇಯಸ್, ಐಶ್ವರ್ಯ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಎಸ್, ಬಾಲು ಅವರ ಛಾಯಾಗ್ರಹಣ, ಜೆಮ್ ಶಿವು ಅವರ ಸಂಭಾಷಣೆ, ಮುತ್ತುರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.  ಎಂ.ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ರೇಖಾದಾಸ್, ಗಣೇಶ್‌ರಾವ್ ಕೇಸರಕರ್ ಹಾಗೂ ಇತರರು  ಪುನೀತ್ ನಿವಾಸದ ಪ್ರಮುಖ  ಪಾತ್ರಗಳಲ್ಲಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,