Punit Nivasa.News

Saturday, January 18, 2025

44

 

'ಪುನೀತ್ ನಿವಾಸ‌’ಕ್ಕೆ ಚಾಲನೆ

   ಇದು ಅಪ್ಪುಅಭಿಮಾನಿಯ ಕಥೆ...

 

   ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರರಂಗದ ದಂತ ಕಥೆಯಾಗಿದ್ದಾರೆ. ಅವರನ್ನು, ಅವರ ಆದರ್ಶಗಳನ್ನು ನೆನಪಿಸುವ ಅನೇಕ ಚಲನಚಿತ್ರಗಳು ಈಗಾಗಲೇ ನಿರ್ಮಾಣವಾಗಿವೆ. ಇದೀಗ ಮತ್ತೊಂದು ತಂಡ ಅಂಥ ಪ್ರಯತ್ನಕ್ಕೆ ಕೈಹಾಕಿದೆ. ’ಪುನೀತ್ ನಿವಾಸ’ ಎಂಬ ಹೆಸರಿಟ್ಟುಕೊಂಡು ಚಲನಚಿತ್ರವೊಂದನ್ನು ಪ್ರಾರಂಭಿಸಿದೆ. ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವರ‌ ಶುಭ ಹಾರೈಕೆಯೂ ಈ ಚಿತ್ರಕ್ಕಿದೆ.

   ಪುಟ್ಟಣ್ಣ ಕಣಗಾಲ್ ರಂಥ ಹಿರಿಯ ನಿರ್ದೇಶಕರ ಜತೆ ಸಹಾಯಕರಾಗಿ ಕೆಲಸ ಮಾಡಿದ ನಾಗೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ತ್ಯಾಗರಾಜ ನಗರದ ಗಂಗಮ್ಮ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಗಂಗಮ್ಮ ತಾಯಿಯ ಮೇಲೆ ಪ್ರಥಮ‌ ದೃಶ್ಯವನ್ನು ಚಿತ್ರೀಕರಿಸಲಾಯಿತು.

   ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾದ ಮಲ್ಲು ಎಂಬ ಹುಡುಗನ ಕಥೆಯಿದು. ತಾನೊಂದು ಸಿನಿಮಾ ಮಾಡಬೇಕೆಂದು ಕೂಡಿಟ್ಟುಕೊಂಡಿದ್ದ ಹಣದಿಂದ ಬಡ ಹುಡುಗಿಗೆ ಮನೆ ಕಟ್ಟಿಸಿಕೊಟ್ಟು ಅದಕ್ಕೆ ಪುನೀತ್ ನಿವಾಸ ಎಂದು ಹೆಸರಿಡುವ ಮೂಲಕ ಪುನೀತ್ ಅವರ ಆದರ್ಶಗಳನ್ನು ಪಾಲಿಸುತ್ತಾನೆ ಎನ್ನುವುದೇ ಚಿತ್ರದ ಮುಖ್ಯಕಥೆ. ಪಂಚಮಿ ಸಿನಿ ಕ್ರಿಯೇಶನ್ಸ್ ಮೂಲಕ

ಮೋಹನ್ ಎಸ್. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಶ್ರೀನಗರ ಕಿಟ್ಟಿ ಜತೆ ಚಿತ್ರವೊಂದನ್ನು ಮಾಡಿದ್ದ ಇವರ ಎರಡನೇ ಚಿತ್ರವೇ ಪುನೀತ್ ನಿವಾಸ.

   ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಭಿಜಿತ್ ಮಾತನಾಡುತ್ತ ನಾನು ಪುನೀತ್ ಅವರಜತೆ ಆ್ಯಕ್ಟ್ ಮಾಡಬೇಕಿತ್ತು. ಅವಕಾಶವೂ ಸಿಕ್ಕಿತ್ತು. ಆದರೆ ಆಗಲಿಲ್ಲ. ಮೋಹನ್ ಅವರು ಈ ಟೈಟಲ್ ಹೇಳಿದಾಗ ಮೈ ರೋಮಾಂಚನವಾಯಿತು. ಮರುಮಾತಾಡದೆ ಒಪ್ಪಿಕೊಂಡೆ ಎಂದು ಹೇಳಿದರು. ನಿರ್ದೇಶಕ ನಾಗೇಂದ್ರ ಪ್ರಸಾದ್ ಮಾತನಾಡುತ್ತ ಪುನೀತ್ ಅವರ ಅಭಿಮಾನಿಯೊಬ್ಬನ ಕಥೆಯಿದು. ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಪ್ಲಾನಿದೆ. ಕೃಪಾಕರ್ ಅವರ  ಸಂಗೀತ ಸಂಯೋಜನೆಯಲ್ಲಿ ಸಾಂಗ್ ಕಂಪೋಜಿಂಗ್ ನಡೆಯುತ್ತಿದೆ ಎಂದು ಹೇಳಿದರು.

ಬಾಲು ಅವರ ಛಾಯಾಗ್ರಹಣ, ಜೆಮ್ ಶಿವು ಅವರ ಸಂಭಾಷಣೆ, ಮುತ್ತುರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.

 ಮಲ್ಲು ಪಾತ್ರದಲ್ಲಿ ಮಾಸ್ಟರ್ ವಿಠ್ಠಲ್ ಜತೆಗೆ ಹಿರಿಯನಟ ಅಭಿಜಿತ್, ಎಂ.ಎಸ್.ಉಮೇಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ಲಕ್ಷ್ಮಿ ಭಟ್, ರೇಖಾದಾಸ್, ಗಣೇಶ್ ರಾವ್ ಕೇಸರಕರ್,

ಶಂಕರಭಟ್, ನಾಗೇಂದ್ರ ಪ್ರಸಾದ್, ಶ್ರೀದರ್ಶನ್  ಪುನೀತ್ ನಿವಾಸದ ಮುಖ್ಯ ಪಾತ್ರಗಳಲ್ಲಿ ಆಭಿನಯಿಸುತ್ತಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,