*--- 'ತಾಯವ್ವ’ ಚಿತ್ರದ ಬಿಡುಗಡೆಯ ಪತ್ರಿಕಾ ಪ್ರಕಟಣೆ---*
*ಮೇ. 30ರಂದು ’ತಾಯವ್ವ’ ತೆರೆಗೆ*
*ಗೀತಪ್ರಿಯಾ ನಟನೆ, ನಿರ್ಮಾಣದ ಚೊಚ್ಚಲ ಚಿತ್ರ ಬಿಡುಗಡೆಗೆ ಸಿದ್ದ*
*ಗ್ರಾಮೀಣ ಸೊಗಡಿನ, ಸಾಮಾಜಿಕ ಕಥಾಹಂದರ ಚಿತ್ರ*
ನವ ಪ್ರತಿಭೆ ಗೀತಪ್ರಿಯಾ ಮೊದಲ ಬಾರಿಗೆ ನಿರ್ಮಿಸಿ ಜೊತೆಗೆ ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ’ತಾಯವ್ವ’ ಚಿತ್ರ ರಾಜ್ಯದಾದ್ಯಂತ ಇದೇ ಮೇ. 30 ರ ಶುಕ್ರವಾರ ತೆರೆಗೆ ಬರಲಿದೆ.
ಸುಮಾರು ಮೂರು ದಶಕದ ಹಿಂದೆಯೇ ’ತಾಯವ್ವ’ ಎಂಬ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬಂದಿದ್ದು, ಆ ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಮತ್ತು ನಟ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಈಗ ಅದೇ ’ತಾಯವ್ವ’ ಹೆಸರಿನಲ್ಲಿ ಹೊಸ ಚಿತ್ರ ತಯಾರಾಗಿದ್ದು, ಇದೇ ಶುಕ್ರವಾರ ತೆರೆಗೆ ಬರಲಿದೆ.
ಇನ್ನು ’ತಾಯವ್ವ’ ಚಿತ್ರದ ಹೆಸರೇ ಹೇಳುವಂತೆ, ಇದು ಅಪ್ಪಟ ಗ್ರಾಮೀಣ ಸೊಗಡಿನ, ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಸಾಮಾಜಿಕ ಕಳಕಳಿಯ ಚಿತ್ರ. ಗ್ರಾಮೀಣ ಪ್ರದೇಶದ ಸೂಲಗಿತ್ತಿ ಮಹಿಳೆಯೊಬ್ಬಳು ಹೇಗೆ ಹೆಣ್ಣುಮಕ್ಕಳ ರಕ್ಷಣೆ ಮಾಡಿ, ಸಮಾಜಕ್ಕೆ ಮಾದರಿಯಾಗುತ್ತಾಳೆ ಎಂಬ ವಿಷಯದ ಸುತ್ತ ’ತಾಯವ್ವ’ ಚಿತ್ರದ ಕಥಾಹಂದರ ಸಾಗುತ್ತದೆ. ಚಿತ್ರದಲ್ಲಿ ’ತಾಯವ್ವ’ನಾಗಿ ಗೀತಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜಾನಪದ ಶೈಲಿಯಲ್ಲಿ ಮೂಡಿ ಬಂದಿರುವ ’ತಾಯವ್ವ’ ಚಿತ್ರದ ಹಾಡುಗಳಿಗೆ ಗೀತಪ್ರಿಯಾ ಅರೇ ಧ್ವನಿಯಾಗಿದ್ದಾರೆ. ’ಅಮರ ಫಿಲಂಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ’ತಾಯವ್ವ’ ಚಿತ್ರಕ್ಕೆ ಸಾತ್ವಿಕ ಪವನ್ ಕುಮಾರ್ ನಿರ್ದೇಶನ ಮಾಡಿದ್ದಾರೆ.