Di Di Dikki.Film News

Friday, April 18, 2025

28

 

*ಮೋಷನ್ ಪೋಸ್ಟರ್ ನಲ್ಲೇ ಮೋಡಿ ಮಾಡಿದ "ಡಿ ಡಿ ಡಿಕ್ಕಿ"* .         

 

 *ಹಂಪಿ ಪಿಕ್ಚರ್ಸ್ &  R K & A K ಎಂಟರ್ಟೈನ್ಮೆಂಟ್ ನಿರ್ಮಾಣದ, ರಂಜನಿ ರಾಘವನ್ ನಿರ್ದೇಶನದ ಈ ಚಿತ್ರಕ್ಕೆ "ನೆನಪಿರಲಿ" ಪ್ರೇಮ್ ನಾಯಕ*

 

 *ಲೆಜೆಂಡ್ ಇಳಯರಾಜ ಸಂಗೀತ ನಿರ್ದೇಶನದ ಈ ನೂತನ ಚಿತ್ರದ ಪ್ರಮುಖಪಾತ್ರದಲ್ಲಿ ಗಣೇಶ್ ಪುತ್ರ ವಿಹಾನ್* .

 

"ಗುರು ಶಿಷ್ಯರು", "ಲ್ಯಾಂಡ್‌ ಲಾರ್ಡ್" ಚಿತ್ರಗಳ ನಿರ್ದೇಶಕ ಹಾಗೂ "ಕಾಟೇರ" ಚಿತ್ರದ ಲೇಖಕ ಜಡೇಶ್ ಕೆ ಹಂಪಿ ಈಗ ನಿರ್ಮಾಪಕರಾಗಿದ್ದಾರೆ.  ಹಂಪಿ ಪಿಕ್ಚರ್ಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ.

ವಿಜಯನಗರ ಮೂಲದವರಾದ ಜಡೇಶ್ ತಮ್ಮ ನಿರ್ಮಾಣ ಸಂಸ್ಥೆಗೆ ಹಂಪಿ ಪಿಕ್ಚರ್ಸ್ ಎಂಬ ಹೆಸರಿಟ್ಟಿದ್ದಾರೆ. ನಿರ್ಮಾಣಕ್ಕೆ ರಾಮಕೃಷ್ಣ ಹಾಗೂ ಆನಂದ್ ಕುಮಾರ್ ನೇತೃತ್ವದ R K & A k ಎಂಟರ್ಟೈನ್ಮೆಂಟ್ ಸಂಸ್ಥೆ ಸಹ ನಿರ್ಮಾಣಕ್ಕೆ ಸಾಥ್ ನೀಡಿದೆ. ಕಲಾವಿದೆಯಾಗಿ ಜನಪ್ರಿಯರಾಗಿರುವ  ರಂಜನಿ ರಾಘವನ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ "ಡಿ ಡಿ ಡಿಕ್ಕಿ" ಎಂದು ಶೀರ್ಷಿಕೆ ಇಡಲಾಗಿದ್ದು, "ನೆನಪಿರಲಿ" ಪ್ರೇಮ್ ನಾಯಕನಾಗಿ ನಟಿಸುತ್ತಿದ್ದಾರೆ. ಲೆಜೆಂಡ್ ಇಳಯರಾಜ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಪ್ರಮುಖಪಾತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ಮಾಸ್ಟರ್ ವಿಹಾನ್ ಕೂಡ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಪ್ರೇಮ್ ಅವರ ಹುಟ್ಟುಹಬ್ಬದ ದಿನ ಈ ನೂತನ ಚಿತ್ರದ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಅನಾವಾರಣ ಅದ್ದೂರಿಯಾಗಿ ನೆರವೇರಿತು. "ಗುರು ಶಿಷ್ಯರು" ಚಿತ್ರದಲ್ಲಿ ನಟಿಸಿದ್ದ ಬಾಲ ಪ್ರತಿಭೆಗಳು ಶೀರ್ಷಿಕೆ ಅನಾವರಣ ಮಾಡಿದರು. ಅದಕ್ಕೂ ಮುನ್ನ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪ್ರೇಮ್ ಅವರಿಗೆ ಪತ್ನಿ ಹಾಗೂ ಪುತ್ರಿ ಆರತಿ ಬೆಳಗಿ ಸಿಹಿ ತಿನಿಸಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು ವಿಶೇಷವಾಗಿತ್ತು. ತಮ್ಮ ಚಿತ್ರದ ಬಿಡುಗಡೆಯ ದಿನವೇ ಅಜೇಯ್ ರಾವ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಮಿತ್ರನಿಗೆ ಶುಭಾಶಯ ತಿಳಿಸಿದರು. ಗುರು ದೇಶಪಾಂಡೆ, ಆರ್ ಎಸ್ ಗೌಡ, ಜಗದೀಶ್ ಗೌಡ, ರವಿ ಗೌಡ, ಕೃಷ್ಣ ಸಾರ್ಥಕ್, "ಲ್ಯಾಂಡ್ ಲಾರ್ಡ್" ಚಿತ್ರದ ನಿರ್ಮಾಪಕ ಸೂರಜ್ ಮುಂತಾದವರು ಪ್ರೇಮ್ ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ರಂಜನಿ ರಾಘವನ್ ಅವರು "ಕಾಟೇರ" ಚಿತ್ರದಲ್ಲೂ ನಮ್ಮ ಬರವಣಿಗೆ ತಂಡದಲ್ಲಿದ್ದರು. ಆನಂತರ ತಾವೇ ಒಂದು ಪುಸ್ತಕ ಬರೆದಿರುವುದಾಗಿ ಹೇಳಿ, ನನಗೆ ಪುಸ್ತಕ ನೀಡಿದರು. ಪುಸ್ತಕ ಓದಿ ಆಶ್ಚರ್ಯವಾಯಿತು. ಸಿನಿಮಾಗೆ ಹೇಳಿ ಮಾಡಿಸಿದ ಕಥೆ ಎನಿಸಿತು. ನಾನು ತರುಣ್ ಸುಧೀರ್ ಅವರ ಜೊತೆಗೆ ಚರ್ಚೆ ಮಾಡಿದೆ. ಆನಂತರ ಚಿತ್ರ ಆರಂಭವಾಯಿತು. ಚಂದದ ಕಥೆ ಬರೆದಿರುವ ರಂಜನಿ ಅವರೆ ನಿರ್ದೇಶನ ಮಾಡಲಿ ಎಂದು ನಿರ್ಧಾರವಾಯಿತು. ಪ್ರೇಮ್ ಅವರೆ ಈ ಕಥೆಗೆ ಸೂಕ್ತ ನಾಯಕ ಎಂದು ಎಲ್ಲರ ಅಭಿಪ್ರಾಯವಾಗಿತ್ತು. ಪ್ರೇಮ್ ಅವರು ಕಥೆ ಕೇಳಿ ಒಪ್ಪಿಕೊಂಡರು. ನಮ್ಮ ಹಂಪಿ ಪಿಕ್ಚರ್ಸ್ ನ ಮೊದಲ ನಿರ್ಮಾಣಕ್ಕೆ ರಾಮಕೃಷ್ಣ ಹಾಗೂ ಆನಂದ್ ಕುಮಾರ್ ಜೊತೆಯಾದರು. ಇಂದು ಪ್ರೇಮ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮೋಷನ್ ಪೋಸ್ಟರ್ ಹಾಗೂ ಶೀರ್ಷಿಕೆ ಅನಾವರಣ ಮಾಡಲಾಗಿದೆ ಎಂದರು ನಿರ್ಮಾಪಕ ಜಡೇಶ್ ಕೆ ಹಂಪಿ.

 

ನಿರ್ಮಾಪಕ ರಾಮಕೃಷ್ಣ ಅವರು ಸಹ ಹಂಪಿ ಪಿಕ್ಚರ್ಸ್ ಜೊತೆಗೂಡಿ ಚಿತ್ರ ನಿರ್ಮಾಣ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು.

 

ನಿರ್ದೇಶಕಿಯಾಗಬೇಕೆಂಬ ಕನಸನ್ನು ನನಸು ಮಾಡಿದ ನಿರ್ಮಾಪಕರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ದೇಶಕಿ ರಂಜನಿ ರಾಘವನ್, "ಡಿ ಡಿ ಡಿಕ್ಕಿ" ಕಥೆ ಬರೆಯುವಾಗ ನನಗೆ ಅನೇಕ ಜನರು ಸಾಥ್ ನೀಡಿದರು. ಕಥೆ ಅಂತಿಮ ಹಂತ ತಲುಪಿದಾಗ ಈ ಕಥೆಗೆ ಪ್ರೇಮ್ ಅವರೆ ನಾಯಕನಾಗಿ ನಟಿಸಬೇಕೆಂದು ಎಲ್ಲರ ಆಸೆಯಾಗಿತ್ತು. ಅವರು ಒಪ್ಪಿಕೊಂಡರು. ಕಾಮಿಡಿ ಮೂಲಕ ಭಾವನಾತ್ಮಕ ಸನ್ನಿವೇಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನಾಯಕ ಗಣೇಶ್ ಪುತ್ರ ವಿಹಾನ್ ಚಿತ್ರದಲ್ಲಿ ಪ್ರೇಮ್ ಅವರ ಪುತ್ರನಾಗಿ ಅಭಿನಯಿಸಿದ್ದಾರೆ. ಸಂಗೀತ ಕ್ಷೇತ್ರದ ಲೆಜೆಂಡ್ ಇಳಯರಾಜ ಅವರು ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡಿರುವುದರಿಂದ ಇದೊಂದು ಸಂಗೀತ ಪ್ರಧಾನ ಚಿತ್ರವೂ ಆಗಲಿದೆ ಎಂಬ ಅಭಿಪ್ರಾಯ ನನ್ನದು. ಈಗಾಗಲೇ ಅರ್ಧಕ್ಕೂ ಹೆಚ್ಚು ಭಾಗ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

 

ಮೊದಲು ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ ಚಿತ್ರತಂಡಕ್ಕೆ, ಸ್ನೇಹಿತರ ಬಳಗಕ್ಕೆ, ಅಭಿಮಾನಿಗಳಿಗೆ ಹಾಗೂ ವಿಶೇಷವಾಗಿ ತಮ್ಮ ಸಿನಿಮಾ ಬಿಡುಗಡೆಯ ಬ್ಯುಸಿಯಲ್ಲಿದ್ದರೂ ನನಗೆ ಹಾರೈಸಲು ಬಂದಿರುವ ಅಜೇಯ್ ರಾವ್ ಅವರಿಗೆ ಧನ್ಯವಾದ ಎಂದು ಮಾತು ಆರಂಭಿಸಿದ ನಾಯಕ ಪ್ರೇಮ್, ಈ ಚಿತ್ರವನ್ನು ನಾನು ಮೊದಲು ಒಪ್ಪಿರಲಿಲ್ಲ. ಗೆಳೆಯ ತರುಣ್ ಸುಧೀರ್ ಮನಸ್ಸಿಗೆ ತಟ್ಟುವಂತೆ ಹೇಳಿದ ಕಥೆ ನನ್ನ ಮನ ಮುಟ್ಟಿತು. ರಂಜನಿ ಅವರು ಅಂತಹ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಲೆಜೆಂಡ್ ಇಳಯರಾಜ ಸಂಗೀತ ನೀಡಿರುವುದು ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಚಿತ್ರದ ಚಿತ್ರೀಕರಣ ಮುಗಿಸಿ ಮನೆಗೆ ಹೋದ ನಂತರ ಚಿತ್ರದ ಸನ್ನಿವೇಶಗಳನ್ನು ನೆನಪಿಸಿಕೊಂಡು ಅತ್ತಿದ್ದು ಉಂಟು. ಗಣೇಶ್ ಪುತ್ರ ವಿಹಾನ್ ಕೂಡ ಅದ್ಭುತ ಕಲಾವಿದ. ವಿವಿಧ ಕಾರಣಗಳಿಂದ ತಮ್ಮ ಊರನ್ನು ಬಿಟ್ಟು ಬೆಂಗಳೂರಿಗೆ ಬಂದ ಎಷ್ಟೋ ಜನರನ್ನು ನಾವು ಊರು ಬಿಟ್ಟು ಬಂದಿದ್ದು ತಪ್ಪಾಯಿತಾ? ಎಂಬ ಪ್ರಶ್ನೆ ಈ ಚಿತ್ರ ನೋಡಿದ ಮೇಲೆ  ಮೂಡುವುದಂತೂ ಖಂಡಿತ. ಕಥೆಗಾರ, ನಿರ್ದೇಶಕ ಜಡೇಶ್ ನಿರ್ಮಾಪಕರಾಗಿರುವುದು ಹಾಗೂ ಭಾವಿ ಸೂಪರ್ ಸ್ಟಾರ್ ಗಳಾದ "ಗುರು ಶಿಷ್ಯರು" ಚಿತ್ರದ ಕಲಾವಿದರು ಶೀರ್ಷಿಕೆ ಅನಾವರಣ ಮಾಡಿದ್ದು ಹೆಚ್ಚಿನ ಖುಷಿಯಾಗಿದೆ ಎಂದರು.

 

ಛಾಯಾಗ್ರಾಹಕ ಸುಧಾಕರ್, ನಟ ಮಹಾಂತೇಶ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,