Takila.Film News

Saturday, April 26, 2025

86

 

'ಟಕೀಲಾ’ ಡ್ರಗ್ಸ್ ಸುಳಿಯಲ್ಲಿ ನಲುಗಿದವರು..

 

  ಜಡ್, ಹೂ ಅಂತೀಯಾ ಉಹೂ ಅಂತೀಯಾ, ಮೀಸೆ ಚಿಗುರಿದಾಗದಂಥ  ಚಿತ್ರಗಳ ನಿರ್ದೇಶಕ ಹಾಗೂ ಫೋಟೋ ಜರ್ನಲಿಸ್ಟ್ ಕೂಡ ಆಗಿರುವ  ಕೆ.ಪ್ರವೀಣ್ ನಾಯಕ್  ಅವರು ಬಹಳ ದಿನಗಳ ನಂತರ ಆಕ್ಷನ್‌ಕಟ್ ಹೇಳಿರುವ ಚಿತ್ರ ಟಕೀಲಾ. ಶ್ರೀಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ಮರಡಿಹಳ್ಳಿ ನಾಗಚಂದ್ರ ಅವರ ನಿರ್ಮಾಣದ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಇತ್ತೀಚೆಗೆ ಚಿತ್ರದ ೨ ಹಾಡುಗಳ ಪ್ರದರ್ಶನ ಹಾಗೂ  ಪತ್ರಿಕಾಗೋಷ್ಟಿ ನೆರವೇರಿತು.

  ಧರ್ಮ ಕೀರ್ತಿರಾಜ್, ನಿಖಿತಾಸ್ವಾಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್, ಜಯರಾಜ್, ಸುಶ್ಮಿತಾ, ನಿರ್ದೇಶಕ ಪ್ರವೀಣ್‌ನಾಯಕ್  ಕೂಡ ಅಭಿನಯಿಸಿದ್ದಾರೆ.

    ಈ ಸಂದರ್ಭದಲ್ಲಿ ಪ್ರವೀಣ್ ನಾಯಕ್ ಮಾತನಾಡುತ್ತ ಮನಸಿನ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ, ಮನಸಿನ ಸಮಸ್ಯೆಗಳನ್ನು ನೋಡ್ತಾ ನೋಡ್ತಾ ಜನರ ಮನಸ್ಥಿತಿ ಅವಲೋಕಿಸಿದಾಗ ಎಲ್ಲರಿಗೂ ಒಂದಲ್ಲ ಒಂದು ಚಿಂತೆಯಿರುತ್ತೆ ಅನ್ನೋದು ಗೊತ್ತಾಯ್ತು, ಇದೆಲ್ಲವನ್ನೂ ಸೇರಿಸಿ ನಾನು, ನನ್ನ ಪತ್ನಿ ಸೇರಿ ನೈಜತೆಗೆ ಹತ್ತಿರವಾಗುವಂಥ ಒಂದು ಕಥೆ ಬರೆದೆವು. ಜೀವನದಲ್ಲಿ  ಮನುಷ್ಯನಿಗೆ  ಒಂದು ಅವಕಾಶ ಸಿಗುತ್ತೆ, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ಇದ್ದರೆ,‌ ಮತ್ತೆ ಎರಡನೇ ಅವಕಾಶ ಸಿಗದೇ ಇರಬಹುದು, ಹಾಗಾಗಿ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ನಮ್ಮ ಚಿತ್ರದ ಮೂಲಕ ಹೇಳಿದ್ದೇನೆ, ತುಂಬಾ ತಡವಾಗಿ ನಿರ್ಧಾರ ತಗೊಂಡರೆ ಅದು ಕೂಡ ಉಪಯೋಗಕ್ಕೆ ಬರಲ್ಲ, ಚಟಗಳು ಅತಿಯಾದಾಗ ಏನು ಬೇಕಾದರೂ ಆಗಬಹುದು, ಡ್ರಗ್ಸ್ ಅನ್ನೋದು ಒಂದು ಸುಳಿ ಇದ್ದಹಾಗೆ, ಅದನ್ನು ಕುತೂಹಲದಿಂದ ಮುಟ್ಟಿ ನೋಡೋ ಪ್ರಯತ್ನ ಮಾಡಬಾರದು ಅನ್ನೋದು ಚಿತ್ರದ ಕಾನ್ಸೆಪ್ಟ್. ಈ ಚಿತ್ರದಲ್ಲಿ ೨ ಹಾಡುಗಳಿದ್ದು ನಾನು ಹಾಗೂ ನಾಗೇಂದ್ರ ಪ್ರಸಾದ್  ಲಿರಿಕ್ಸ್ ಬರೆದಿ

ದ್ದೇವೆ. 

. ಚಿತ್ರದಲ್ಲಿ ಸ್ವಲ್ಪ ಅಡಲ್ಟ್ ಕಂಟೆಂಟ್ ಕೂಡ ಬರುತ್ತೆ, ಹಾಗಂತ ಯಾವುದನ್ನೂ  ವಲ್ಗರ್ ಆಗಿ ತೋರಿಸಿಲ್ಲ, ಕ್ಲಾಸ್ ಆಗಿ ಹೇಳೋ ಪ್ರಯತ್ನ ಮಾಡಿದ್ದೇನೆ.  ಜೀವನದಲ್ಲಿ ನಾನು ನೋಡಿದ, ಕೇಳಿದ ಅನುಭವಗಳೇ ಈ ಸಿನಿಮಾವಾಗಿದೆ.  ಸೈಕಾಲಜಿ ಜತೆಗೆ ಸ್ಪಿರಿಚುಯಾಲಿಟಿ ಬೆರೆಸಿ ಮಾಡಿದ ಚಿತ್ರವಿದಾಗಿದ್ದು, ಈ ಮೂಲಕ ಒಂದು ಅರಿವು ಮೂಡಿಸುವ ಪ್ರಯತ್ನ ಎನ್ನಬಹುದು,  ಟೈಟಲ್ ಸಾಂಗ್ ಒಂದೇ ದಿನದಲ್ಲಿ ಒಂದೂವರೆ ಲಕ್ಷ ವೀಕ್ಷಣೆಯಾಗಿದೆ ಎಂದು ಹೇಳಿದರು.

  ನಂತರ ನಿರ್ಮಾಪಕ ನಾಗಚಂದ್ರ ಮಾತನಾಡಿ ಮೊದಲು ಚಿಕ್ಕದಾಗಿ ಮಾಡೋಣ ಅಂದುಕೊಂಡದ್ದು ನಂತರ ದೊಡ್ಡದಾಯ್ತು. ಅಲ್ಲದೆ ಹಲವಾರು ಕಾರಣಗಳಿಂದ ಸಿನಿಮಾದ ಬಿಡುಗಡೆ ತಡವಾಗಿದೆ. ಚಿತ್ರವನ್ನು ವಿತರಕ‌ ಜಯಣ್ಣ ಅವರು ರಿಲೀಸ್ ಮಾಡುತ್ತಿದ್ದಾರೆ, ಕರ್ನಾಟಕದಾದ್ಯಂತ ೧೫೦ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಟಕೀಲ ತೆರೆಗೆ ಬರಲಿದೆ ಎಂದರು,

   ನಾಯಕ ಧರ್ಮ ಕೀರ್ತಿರಾಜ್ ಮಾತನಾಡುತ್ತ  ನಾನು ಈ ಸಿನಿಮಾದಲ್ಲಿ ಅಭಿನಯಿಸಲು ಕಾರಣ ನಿರ್ಮಾಪಕ ನಾಗಚಂದ್ರ, ಅವರಿಗೆ ಈ ಚಿತ್ರದಿಂದ ಒಳ್ಳೇ ಹೆಸರು ಬರಲಿ, ನಮ್ಮ ತಂದೆಯವರಿಗೆ ಪ್ರವೀಣ್ ನಾಯಕ್ ಅವರಜತೆ ಸಿನಿಮಾ ಮಾಡ್ತಿದೀನಿ ಎಂದಾಗ ಮಾಡು ಅಂಥವರ ಬಳಿ ಕಲಿಯುವುದು ಬಹಳಷ್ಟಿರುತ್ತೆ ಎಂದು ಪ್ರೋತ್ಸಾಹಿಸಿದರು. ಈ ಸಿನಿಮಾ ಮೂಲಕ ನನಗೆ ಖಂಡಿತ ಒಳ್ಳೇ ಹೆಸರು ಬರುತ್ತೆ ಎಂಬ ನಂಬಿಕೆಯಿದೆ, ಒಬ್ಬ ಬ್ಯುಸಿನೆಸ್ ಮ್ಯಾನ್ ಪಾತ್ರ ಮಾಡಿದ್ದು, ಆತ ಯಾವುದೋ ಒಂದು ಚಟಕ್ಕೆ ಬಿದ್ದಾಗ ಏನೆಲ್ಲ ಆಗಬಹುದೆಂದು ತೋರಿಸಲಾಗಿದೆ ಎಂದರು.

    ನಾಯಕಿ ನಿಖಿತಾಸ್ವಾಮಿ ಮಾತನಾಡಿ ನನಗೆ ಈ ಕಥೆ ಹೇಳಿದಾಗ ತುಂಬಾ ಚಾಲೆಂಜಿಂಗ್ ಪಾತ್ರ ಎನಿಸಿತು, ಇದರಲ್ಲಿ ಹಲವಾರು ಶೇಡ್ಸ್ ಬರುತ್ತೆ, ನನ್ನಿಂದಾದ ಎಫರ್ಟ್ ಹಾಕಿದ್ದೇನೆ ಎಂದರು.

   ನಂತರ ಸಂಗೀತ ನಿರ್ದೇಶಕ ರೇಣುಕುಮಾರ್, ನಟ ಸಂಕಲನಕಾರ ನಾಗೇಂದ್ರ ಅರಸ್, ಸಹ ನಿರ್ಮಾಪಕರಾದ ಶಂಕರ ರಾಮರೆಡ್ಡಿ, ಚನ್ನತಿಮ್ಮಯ್ಯ ಮುಂತಾದವರು ಟಕೀಲಾ ಚಿತ್ರದ ಕುರಿತಂತೆ  ಮಾತನಾಡಿದರು. ಪಿ.ಕೆ.ಹೆಚ್. ದಾಸ್ ಅವರ ಛಾಯಾಗ್ರಹಣ, ಗಿರೀಶ್ ಅವರ ಸಂಕಲನ,  ಪ್ರಶಾಂತ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,