Ramzan.Film Reviews

Friday, April 21, 2023

543

ಉಳ್ಳವರು ಮತ್ತು ಇಲ್ಲದವರ ಕಥನ****

       ಫಕೀರ್ ಮೊಹಮ್ಮದ್ ಕಟ್ಟಾಡಿ ಬರೆದಿರುವ ‘ನೋಂಬು’ ಕಥೆಯು ‘ರಂಜಾನ್’ ಚಿತ್ರವಾಗಿ ಮೂಡಿಬಂದಿದೆ. ಇಸ್ಲಾಂ ಸಮುದಾಯದ ಕಲ್ಮಾ, ರೋಜಾ, ನಮಾಜ್, ಜಕಾತ್ ಹಾಗೂ ಹಜ್ ಎಂಬ ಐದು ಮೂಲಭೂತ ತತ್ವಗಳ ಪರಿಪಾಲನೆ ಹೇಗೆ ಮಾಡಬೇಕು. ಉಳ್ಳವರು ಮತ್ತು ಇಲ್ಲದವರ ಬದುಕು ಹೇಗಿರುತ್ತದೆ. ಬಡತನದಲ್ಲಿದ್ದರೂ ಸುಖ ಜೀವನ ನಡೆಸುವ ಕುಟುಂಬ, ಎಲ್ಲವೂ ಇದ್ದರೂ ನೆಮ್ಮದಿ ಕಾಣದ ದಂಪತಿಗಳು. ಇದರ ಜೊತೆಗೆ ಭೂಸ್ವಾದೀನದ ಕೆಲವೊಂದು ಅಂಶಗಳನ್ನು ತೆರೆದಿಡುವ ಪ್ರಯತ್ನವನ್ನು ಮಾಡಲಾಗಿದೆ.

ಕಥಾನಾಯಕ ಗುಜರಿ ವ್ಯಾಪಾರಿ, ಅರ್ಥ ಮಾಡಿಕೊಳ್ಳುವ ಪತ್ನಿ ಹಲೀಮಾ, ಮಗಳು ಅಮೀನಾ ಮತ್ತು ಮಗ ಅದ್ದುವಿನೊಂದಿಗೆ ಸುಂದರ ಸಂಸಾರ ನಡೆಸುತ್ತಿರುತ್ತಾರೆ. ಸರ್ಕಾರ ಅಭಿವೃದ್ದಿ ಕಾರ್ಯಗಳಿಗಾಗಿ ಜಮೀನು ವಶಪಡಿಸಿಕೊಳ್ಳಲು ಬಂದಾಗ, ಇದರ ಬಗ್ಗೆ ಆಕ್ಷೇಪಣೆ ಇದೆ ಎಂದು ಸರ್ಕಾರದ ವಿರುದ್ದ ಸಿಡಿದೇಳುತ್ತಾನೆ. ಇದರಿಂದ ಕಷ್ಟಗಳು ಒದಗಿಬಂದಾಗ, ‘ಫಲವತ್ತು ಭೂಮಿ ಹಿತರಕ್ಷಣಾ ಸಮಿತಿ’ ಕಟ್ಟಿಕೊಂಡು ಎಲ್ಲಾ ಧರ್ಮದವರನ್ನು ಸೇರಿಸಿಕೊಂಡು ಹೋರಾಟ ನಡೆಸುತ್ತಾರೆ. ಇದರ ಮಧ್ಯೆ ಮಗನಿಗೆ ಖಾಯಿಲೆ ಕಾಣಿಸಿಕೊಳ್ಳುತ್ತದೆ. ಮುಂದೆ ಎರಡು ಸಮಸ್ಯೆಗಳು ಒಟ್ಟಿಗೆ ಉದ್ಬವವಾಗುತ್ತದೆ. ಅಂತಿಮವಾಗಿ ಈತನ ಹೋರಾಟಕ್ಕೆ ಫಲ ಸಿಕ್ಕುತ್ತದಾ? ಮಗನಿಗೆ ಬಂದ ಖಾಯಿಲೆ ವಾಸಿಯಾಗುತ್ತದಾ? ಇದನ್ನು ತಿಳಿಯಲು ಸಿನಿಮಾ ನೋಡಬೇಕು?

      ಮನೆ ಒಡೆಯನಾಗಿ ಸಂಗಮೇಶ ಉಪಾಸೆ ಮುಖ್ಯ ಪಾತ್ರದಲ್ಲಿ ನಟಿಸುವ ಜತೆಗೆ ಸಂಭಾಷಣೆ, ಸಾಹಿತ್ಯ ಬರೆದಿರುವುದು ವಿಶೇಷ. ರಿಯಲ್ ಲೈಫ್ ಪತ್ನಿ ಪ್ರೇಮಾವತಿ ಉಪಾಸೆ ರೀಲ್‌ದಲ್ಲೂ ಅದೇ ಪಾತ್ರವನ್ನು ನಿರ್ವಹಿಸಿದ್ದಾರೆ. ಅದೇ ರೀತಿ ಮಗಳು ಬೇಬಿ ಈಶಾನಿ ಉಪಾಸೆ ಕಾಣಿಸಿಕೊಂಡಿದ್ದಾರೆ. ಕೆ.ಎಂ.ಇಂದ್ರ ಸಂಗೀತದಲ್ಲಿ ರವೀಂದ್ರ ಸೊರಗಾವಿ ಹಾಡಿರುವ ‘ಅಲ್ಲಾ ಹು ಅಲ್ಲಾ ನೀನೆ ಜಗವೆಲ್ಲಾ’ ಗೀತೆ ಆಲಿಸುವಂತಿದೆ. ಚಿತ್ರದ ಶೀರ್ಷಿಕೆ ಒಂದು ಧರ್ಮಕ್ಕೆ ಸೀಮಿತವಾಗಿದ್ದರೂ, ಕಥೆಯು ಎಲ್ಲಾ ಧರ್ಮದವರು ನೋಡುವಂತೆ ಚಿತ್ರಕಥೆಯನ್ನು ಸೃಷ್ಟಿಸಿರುವುದು ವಿಶೇಷ. ಹೊಡಿ ಬಡಿ ಚಿತ್ರಗಳ ಮಧ್ಯೆ ಭಾವನೆಗಳನ್ನು ಕೆಣಕುವ ಚಿತ್ರ ಇದಾಗಿದೆ ಎನ್ನಬಹುದು.

 

Copyright@2018 Chitralahari | All Rights Reserved. Photo Journalist K.S. Mokshendra,