ಭೈರಾದೇವಿ ಸೇಡಿನ ಕಥನ****
‘ಭೈರಾದೇವಿ’ ಚಿತ್ರವು ನೊಂದ ಹೆಣ್ಣಿನ ಆತ್ಮವೊಂದರ ದ್ವೇಷದ ಕಥೆಯನ್ನು ಹೇಳಲಿದೆ. ಇದರ ಜತೆಗೆ ಅಘೋರಿ ಪಾತ್ರವನ್ನು ಲಿಂಕ್ ಮಾಡಿರುವುದು ವಿಶೇಷ. ಮೂರು ಪಾತ್ರದ ಸುತ್ತ ಸಿನಿಮಾವು ಸಾಗುತ್ತದೆ. ಡಿಸಿಪಿ ಅರವಿಂದ್ ನಾದಿನಿ ಮೇಲೆ ಕಣ್ಣು ಹಾಕುತ್ತಾನೆ. ಇದನ್ನು ಅರಿತ ಪತ್ನಿ ಮನೆ ಮೇಲಿಂದ ಬಿದ್ದು ಸಾಯುತ್ತಾಳೆ. ಅಕ್ಕನ ಸಾವಿನ ಹಿನ್ನಲೆ ಅರಿತ ಶಾಲಿನಿ ದೂರು ಕೊಡಲು ಆಯುಕ್ತರ ಕಛೇರಿಗೆ ಹೋಗುವಾಗ ಸ್ಕೂಟರ್ ಅಪಘಾತದಲ್ಲಿ ಮರಣಿಸುತ್ತಾಳೆ. ಮುಂದೆ ಅರವಿಂದ್ ಮಗಳನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾನೆ. ಮನೆಯಲ್ಲಿ ವಿಚಿತ್ರ ಘಟನೆಗಳು ನಡೆದು ಶಾಲಿನಿಯೇ ಪ್ರೇತವಾಗಿ ಕಾಡುತ್ತಿದ್ದಾಳೆಂದು ತಿಳಿದು ಬರುತ್ತದೆ. ಜೀಪ್ ಚಾಲಕನ ಸಲಹೆಯಂತೆ ವಾರಣಾಸಿಗೆ ಹೋಗಿ ಬಾಬಾ ಸ್ವಾಮಿನಾಥ ಮತ್ತವರ ಶಿಷ್ಯೆ ಭೈರಾದೇವಿಯನ್ನು ಭೇಟಿ ಮಾಡುತ್ತಾರೆ. ಭಂಗಿ ಸೇದುವ ಆಕೆಯಲ್ಲಿ ಅರವಿಂದ್ ಸಮಸ್ಯೆಯನ್ನು ಹೇಳಿಕೊಳ್ಳುತ್ತಾನೆ. ಮಂತ್ರ ಶಕ್ತಿಯಿಂದ ಆ ಅತೃಪ್ತ ಆತ್ಮವನ್ನು ಕಟ್ಟಿಹಾಕಲು ಮುಂದಾದಾಗ ಭೈರಾದೇವಿಗೆ ಸತ್ಯ ವಿಷಯವೊಂದು ತಿಳಿಯುತ್ತದೆ. ಹಾಗಾದರೆ ಶಾಲಿನಿ ಸತ್ತಿದ್ದು ಹೇಗೆ? ಆ ಆತ್ಮ ಯಾರದು? ಎಲ್ಲಾ ಪ್ರಶ್ನೆಗಳಿಗೂ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ.
ನಿರ್ದೇಶಕ ಶ್ರೀಜೈ ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದೆ. ಶೀರ್ಷಿಕೆ ಹೆಸರಿನಲ್ಲಿ ರಾಧಿಕಾಕುಮಾರಸ್ವಾಮಿ ಅದ್ಬುತವಾಗಿ ಕಾಣಿಸಿಕೊಂಡಿದ್ದಾರೆ. ಹೆಣ್ಣು ಅಘೋರಿಯಾಗಿ ವೇಷ ಭೂಷಣದೊಂದಿಗೆ ಪರಕಾಯ ಪ್ರವೇಶ ಮಾಡಿರುವುದು ವಿಶೇಷ. ಡಿಸಿಪಿಯಾಗಿ ರಮೇಶ್‌ಅರವಿಂದ್ ನೆಗಟೀವ್ ಆಗಿ ಪರದೆ ಮೇಲೆ ಚೆನ್ನಾಗಿ ನಿಭಾಯಿಸಿದ್ದಾರೆ. ಪತ್ನಿಯಾಗಿ ಅನುಪ್ರಭಾಕರ್, ಸ್ವಾಮಿನಾಥನಾಗಿ ರವಿಶಂಕರ್, ಚಾಲಕನಾಗಿ ರಂಗಾಯಣರಘು, ಪುರೋಹಿತರಾಗಿ ಶಿವರಾಂ ಇವರೆಲ್ಲರೂ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸದ್ದಾರೆ. ಸೆಂಥಿಲ್ ಪ್ರಶಾಂತ್ ಸಂಗೀತ, ವಾಲಿ ಛಾಯಾಗ್ರಹಣ ಇದೆಲ್ಲಕ್ಕೂ ಪೂರಕವಾಗಿದೆ.
****