ಅನ್ಲಾಕ್ ನಡುವಿನ ಫಜೀತಿಗಳು****
ರಾಘವ್ (ಮಿಲಂದ್) ಖತರ್‌ನಾಕ್ ಬುದ್ದಿವಂತ. ಮನೆ, ಕಾರು, ಬೈಕು ಹೀಗೆ ಯಾವುದೇ ಬೀಗವನ್ನು ಬಾಳೆಹಣ್ಣು ಸುಲಿದಂತೆ ತೆಗೆಯುತ್ತಾನೆ. ಅವನು ಚಿಕ್ಕಂದಿನಿಂದಲೂ ಜಾನಕಿ (ರೆಚಲ್)ಯನ್ನು ಪ್ರೀತಿಸುತ್ತಿರುತ್ತಾನೆ. ಅವಳಿಗೂ ಅವನೆಂದರೆ ತುಂಬ ಇಷ್ಟ. ಆದರೆ ಊಹಿಸಲಾಗದ ಸಂದಿಗ್ದ ಸ್ಥಿತಿಯಲ್ಲಿ ಇಬ್ಬರೂ ದೂರವಾಗುತ್ತಾರೆ. ಅವಳ ನೆನಪಿನಲ್ಲೆ ಅನ್‌ಲಾಕ್ ಮಾಡುವುದೇ ಬದುಕು ಅಂದುಕೊಂಡು, ಆಕೆಯ ಹೆಸರಿನಲ್ಲಿ ಯೂನಿವರ್ಸಿಟಿಯನ್ನು ಶುರು ಮಾಡಿರುತ್ತಾನೆ. ಜತೆಗೆ ಅವಳ ಹುಡುಕಾಟವನ್ನು ನಿಲ್ಲಿಸಿರುವುದಿಲ್ಲ. ಅದೇ ಸಂದರ್ಭದಲ್ಲಿ ೧೧೦೦ನೇ ಶತಮಾನದಲ್ಲಿ ಕೋಟೆನಾಡಿನ ಹೊಲದಲ್ಲಿ ಹೂತಿಟ್ಟ ನಿಧಿಯೊಂದರ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ಸಿಗುತ್ತದೆ.
. ಅಲ್ಲಿಗೆ ಕಮಿಷನರ್ ಜತೆಗೆ ಮಗಳು ಜಾನಕಿ ಬರುತ್ತಾಳೆ. ಮತ್ತೋಂದು ಕಡೆ ನಿಧಿಯನ್ನು ದೋಚಲು ಪೀಟರ್ ಮತ್ತು ಪಾಂಡೆ ಹಿಂದೆ ಬೀಳುತ್ತಾರೆ. ಕೊನೆಗೆ ನಿಧಿ ಯಾರಿಗೆ ಸಿಗುತ್ತದೆ. ರಾಘವ್‌ನಿಗೆ ಜಾನಕಿ ಸಿಗುತ್ತಾಳಾ? ಎಲ್ಲವನ್ನು ತಿಳಿಯಲು ‘ಅನ್‌ಲಾಕ್ ರಾಘವ’ ಸಿನಿಮಾ ನೋಡಬೇಕು.
ನಾಯಕ ಮಿಲಂದ್ ಹಿಂದಿನ ಚಿತ್ರಕ್ಕಿಂತ ಅಭಿನಯ, ಡ್ಯಾನ್ಸ್, ಫೈಟ್‌ದಲ್ಲಿ ಮಿಂಚಿದ್ದಾರೆ. ನಾಯಕಿ ರೆಚಲ್‌ಡೇವಿಡ್ ಚಂದ ಕಾಣಿಸುತ್ತಾರೆ. ಆಗಾಗ ನಗಿಸಲು ಸಾಧುಕೋಕಿಲ ಎಂಟ್ರಿ ಕೊಡುತ್ತಾರೆ. ಉಳಿದಂತೆ ಅವಿನಾಶ್, ಶೋಭರಾಜ್, ಧರ್ಮಣ್ಣ, ಭೂಮಿಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದೀಪಕ್ ಸುಬ್ರಮಣ್ಯ ನಿರ್ದೇಶನದಲ್ಲಿ ಹೊಸತನ್ನು ನೋಡಬಹುದು. ಅನೂಪ್ ಸೀಳನ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಒಟ್ಟಾರೆ ಕೊಟ್ಟ ಕಾಸಿಗೆ ಚಿತ್ರವು ಮೋಸ ಮಾಡೋದಿಲ್ಲ. ಮಂಜುನಾಥ್, ಗಿರೀಶ್‌ಕುಮಾರ್ ನಿರ್ಮಾಣವಿದೆ.
****