ನಕ್ಕು ನಲಿಸುವ ಮಿಸ್ಟರ್ ರಾಣಿ!
ಚಿತ್ರ: ಮಿಸ್ಟರ್ ರಾಣಿ
ನಿರ್ದೇಶನ: ಮಧು ಚಂದ್ರ
ತಾರಾಗಣ: ದೀಪಕ್ ಸುಬ್ರಹ್ಮಣ್ಯ, ಪಾರ್ವತಿ ನಾಯರ್ ಮೊದಲಾದವರು.
ತಂದೆಯ ಒತ್ತಡದಿಂದಾಗಿ ಇಂಜಿನಿಯರ್ ಆಗುವ, ಹುಟ್ಟು ಕಲಾವಿದ ಏನೆಲ್ಲ ಮಾಡಬಹುದು ಎನ್ನುವುದನ್ನು ರಸವತ್ತಾಗಿ ತೋರಿಸಿರುವ ಸಿನಿಮಾ ಇದು. ಕಾಲೇಜ್ ಸ್ಕಿಟ್ ನಲ್ಲಿ ನಟಿಯಾಗಿ ಗಮನ ಸೆಳೆದ ನಟ, ಮುಂದೆ ನಟಿಯಾಗಿತೇ ವೇಷ ಮರೆಸಿಕೊಂಡು ಜೀವನ ನಡೆಸಿದರೆ ಹೇಗಿರಬಹುದು? ಇಂಥದೊಂದು ನಂಬಲು ಅಸಾಧ್ಯವೆನಿಸುವ ಕತೆಯನ್ನು ನಗುನಗುತ್ತಾ ನೋಡುವಂತೆ ರಸವತ್ತಾಗಿ ನೀಡಿದ್ದಾರೆ ನಿರ್ದೇಶಕ ಮಧುಚಂದ್ರ.
ಚಿತ್ರದಲ್ಲಿ ನಾಯಕ ಮಾತ್ರವಲ್ಲ ನಿಜಕ್ಕೂ ನಾಯಕಿಯಾಗಿಯೂ ಗಮನ ಸೆಳೆಯುವವರು ದೀಪಕ್ ಸುಬ್ರಹ್ಮಣ್ಯ. ಅವರು ತಮ್ಮ ದೇಹದ ಮೂಲಕ ಮಾತ್ರವಲ್ಲ ನಟನಾ ರೀತಿಯಿಂದಲೂ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾರೆ. ನಟಿಯಾಗಿಯೂ ನಿಲ್ಲುತ್ತಾರೆ! ನಿರ್ದೇಶಕನ ಪಾತ್ರವನ್ನು ನಿಭಾಯಿಸಿರುವ ಒರಿಜಿನಲ್ ನಿರ್ದೇಶಕ ಮಧುಚಂದ್ರ ಕೂಡ ಹಾಸ್ಯಮಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕ ಪ್ರೀತಿಸುವ ದೀಪಿಕಾ ಎನ್ನುವ ಹುಡುಗಿಯ ಪಾತ್ರದಲ್ಲಿ ಪಾರ್ವತಿ ನಾಯರ್ ಚಿತ್ರದ ಪಾತ್ರಕ್ಕೆ ಹೊಂದುವಂತೆ ಕಾಣಿಸಿದ್ದಾರೆ. ನಾಯಕನ ತಂದೆಯಾಗಿ ನಟಿಸಿರುವ ಆನಂದ್ ಪಾತ್ರ ಪೋಷಣೆಯೂ ಚೆನ್ನಾಗಿದೆ.
ಸಿನಿಮಾದೊಳಗಿನ ಸಿನಿಮಾ ಕತೆಯನ್ನು ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ತೋರಿಸಿರುವ ರೀತಿ ಅದ್ಭುತವಾಗಿದೆ. ಚಿತ್ರದೊಳಗೆ ಎಲ್ಲಿಯೂ ಅಶ್ಲೀಲತೆಯ ಸೋಂಕು ಮೂಡದಂತೆ ಪೂರ್ತಿಗೊಳಿಸಿರುವ ನಿರ್ದೇಶಕರ ಪ್ರಯತ್ನ ಶ್ಲಾಘನೀಯ. ಆಕರ್ಷಕ ಹಿನ್ನೆಲೆ ಸಂಗೀತ ಕೂಡ ಚಿತ್ರದ ಮತ್ತೊಂದು ಗಮನಾರ್ಹ ಅಂಶ.
ಗಂಡು ಹೆಣ್ಣಾಗಿ ನಟಿಸಿರುವ ಚಿತ್ರಗಳು ಕನ್ನಡದಲ್ಲೂ ಈಗಾಗಲೇ ಬಂದಿವೆ. ಆದರೆ ಅಂಥ ಚಿತ್ರಗಳ ನಡುವೆ ವಿಭಿನ್ನ ಸ್ಥಾನ ಪಡೆಯಬಲ್ಲ ಹಾಗೂ ಕೌಟುಂಬಿಕ ಮನರಂಜನೆಯ ಚಿತ್ರವಾಗಿ ಮಿಸ್ಟರ್ ರಾಣಿ ಸ್ಥಾನ ಪಡೆಯುತ್ತದೆ.