ಕಾಸಿನ ಹಿಂದೆ ಹೋಗುವ ಜೇಮ್ಸ್ ಬಾಂಡ್****
ಕಾಸು ಇದ್ದರೆ ಜೀವನ ಪೂರ್ತಿ ಸುಖವಾಗಿ ಇರಬಹುದು ಅಂದುಕೊಂಡ ವ್ಯಕ್ತಿಯೊಬ್ಬ ಇರುತ್ತಾನೆ. ಮತ್ತೊಂದು ಕಡೆ ಶಾಸಕ ಬ್ಯಾಂಕಿನಲ್ಲಿ ಇಟ್ಟಿದ್ದ ೨೫ ಕೋಟಿ ದರೋಡೆಯಾಗುತ್ತದೆ. ಅದಕ್ಕೆ ಕಾರಣ ಯಾರು? ಯಾಕೆ ದುಡ್ಡು ಕದ್ದಿರುತ್ತಾರೆ. ಶಾಸಕನಿಗೆ ಮತ್ತೆ ಹಣ ಸಿಗುತ್ತಾ? ಕಳ್ಳತನವಾದ ದುಡ್ಡು ಏನಾಗುತ್ತೆ? ಏನಾದರೂ ಮಾಡಬೇಕಾದರೆ ಅದು ಒಳ್ಳೆಯದು, ಕೆಟ್ಟದು. ಅವರವರ ಭಕುತಿಗೆ ಬಿಟ್ಟದ್ದು. ಒಮ್ಮೊಮ್ಮೆ ಕೆಟ್ಟ ಕೆಲಸವು ನಗಣ್ಯ ಎಂಬುದಕ್ಕೆ ಉದಾಹರಣೆ ‘ರಾಜು ಜೇಮ್ಸ್ ಬಾಂಡ್’ ಚಿತ್ರ ಆಗಿರುತ್ತದೆ. ‘ಫಸ್ಟ್ ರ‍್ಯಾಂಕ್ ರಾಜು’ ‘ರಾಜು ಕನ್ನಡ ಮೀಡಿಯಂ’ ಚಿತ್ರಗಳಲ್ಲಿ ನಟಿಸಿದ್ದ ಗುರುನಂದನ್ ಹ್ಯಾಟ್ರಿಕ್ ಎನ್ನುವಂತೆ ಈಗ ಮತ್ತದೆ ರಾಜು ಹೆಸರಿನಲ್ಲಿ ನಾಯಕನಾಗಿ ಮಿಂಚಿದ್ದಾರೆ. ಅಷ್ಟೇ ಅಲ್ಲ ಡ್ಯಾನ್ಸ್ ಫೈಟ್‌ನಲ್ಲಿ ಗಮನ ಸೆಳೆದಿದ್ದಾರೆ.
ದೀಪಕ್ ಮಧುವನಹಳ್ಳಿ ಎಂದಿನಂತೆ ಈ ಬಾರಿಯೂ ವಿನೂತನ ಹಾಸ್ಯ ಕತೆಗೆ ತಿರುವುಗಳನ್ನು ಕೊಡುತ್ತಾ ಪ್ರೇಕ್ಷಕರನ್ನು ನಗಿಸಿದ್ದಾರೆ. ನಾಯಕಿ ಮೃದುಲಗೆ ಭವಿಷ್ಯದಲ್ಲಿ ಅವಕಾಶ ಸಿಗುವ ಲಕ್ಷಣಗಳು ಕಾಣಿಸುತ್ತದೆ. ಉಳಿದಂತೆ ಅಚ್ಯುತಕುಮಾರ್, ತಬಲಾನಾಣಿ, ಸಾಧುಕೋಕಿಲ, ಶಾಸಕನಾಗಿ ರವಿಶಂಕರ್, ಚಿಕ್ಕಣ್ಣ ಇವರೆಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನೂಪ್ ಸೀಳನ್ ಸಂಗೀತದಲ್ಲಿ ‘ಕಣ್ಮಣಿ’ ಹಾಡು ಕೇಳಲು ನೋಡಲು ಚೆಂದ ಅನಿಸುತ್ತದೆ. ಒಟ್ಟಾರೆ ಎರಡು ಗಂಟೆಗಳ ಕಾಲ ಸಿನಿಮಾವು ನಕ್ಕು ಎಂಜಾಯ್ ಮಾಡಿಸುತ್ತದೆಂದು ಘಂಟಾಘೋಷವಾಗಿ ಹೇಳಬಹುದು. ಕಿರಣ್ ಮತ್ತು ಮಂಜುನಾಥ್ ನಿರ್ಮಾಣ ಮಾಡಿದ್ದಾರೆ.
****