ಚಿತ್ರ: ವಾಮನ****
ನಿರ್ಮಾಣ: ಚೇತನ್ಗೌಡ
ನಿರ್ದೇಶನ: ಶಂಕರ್ ರಾಮನ್
ತಾರಾಗಣ: ಧನ್ವೀರ್, ರೀಷ್ಮಾನಾಣಯ್ಯ, ತಾರಾ, ಸಂಪತ್, ಸುಧಿ, ಆದಿತ್ಯಮೆನನ್, ಅವಿನಾಶ್, ಅಚ್ಯುತಕುಮಾರ್ ಮತ್ತಿತರರು
ದುರಳರನ್ನು ಸದೆಬಡಿಯುವ ವಾಮನ
‘ವಾಮನ’ ಹೆಸರೇ ಹೇಳುವಂತೆ ಇದೊಂದು ಮಾಸ್ ಚಿತ್ರವೆಂದು ಹೇಳಬಹುದು. ಅದರಂತೆ ಇಲ್ಲಿ ಭರ್ಜರಿ ಆಕ್ಷನ್‌ಗಳು, ಲಾಂಗು, ಮಚ್ಚು, ಗನ್ ರಕ್ತದೋಕಳಿಗಳು ಇವುಗಳೇ ಪ್ರಧಾನ. ಎಲ್ಲಾ ಚಿತ್ರಗಳಲ್ಲಿ ಅಪ್ಪನಿಗೆ ತೊಂದರೆ ಕೊಟ್ಟವರನ್ನು ಮಗನು ಸೇಡು ತೀರಿಸಿಕೊಳ್ಳುತ್ತಾನೆ. ಆದರೆ ಇದರಲ್ಲಿ ಅಪ್ಪ ಕಟ್ಟಿದ ಸಾಮ್ರಾಜ್ಯವನ್ನು ಹಾಳು ಮಾಡುವುದು ಈತನ ಗುರಿಯಾಗಿರುತ್ತದೆ. ಅಷ್ಟಕ್ಕೂ ತಂದೆಯೇ ಯಾಕೆ ಟಾರ್ಗೆಟ್ ಆಗಿರುತ್ತಾರೆ. ಇಬ್ಬರ ನಡುವೆ ದ್ವೇಷ ಮೂಡಲು ಕಾರಣವಾದರು ಏನು? ಗುಣ ಅಂತ ಹೆಸರು ಇಟ್ಟುಕೊಂಡು ಅದಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿರುತ್ತಾನೆ. ಇವನಲ್ಲಿ ರಕ್ಷಕ, ರಾಕ್ಷಸನೂ ಇರುತ್ತಾನೆ. ಜತೆಗೆ ನಿಜವಾದ ಪ್ರೇಮಿ. ಲೋಕ ಕಲ್ಯಾಣಕ್ಕಾಗಿ ವಿಷ್ಣು, ವಾಮನ ಅವತಾರಿಯಾಗಿ ಮೂರು ಹೆಜ್ಜೆ ಇಟ್ಟಂತೆ, ಇಲ್ಲಿಯೂ ನಾಯಕ ಗುಣ, ಹೋರಾಟದ ಮೂರು ಹೆಜ್ಜೆ ಇಡುತ್ತಾನೆ. ಆತನಲ್ಲಿ ಒಳ್ಳೆಯದು, ಕೆಟ್ಟ ಬುದ್ದಿ ಇದೆಯೋ ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಪ್ರೇಕ್ಷಕ ಪ್ರಭುಗಳು ಬರಬೇಕು.
ಸಿನಿಮಾದಿಂದ ಸಿನಿಮಾದವರೆಗೆ ಹೆಚ್ಚು ಪಕ್ವಗೊಳ್ಳುತ್ತಿರುವ ಹೀರೋ ಧನ್ವೀರ್ ನಟನೆ, ಸಾಹಸದಲ್ಲಿ ಮಿಂಚಿದ್ದಾರೆ. ನಾಯಕಿ ರೀಷ್ಮಾನಾಣಯ್ಯ ಚೆಂದ ಕಾಣಿಸುತ್ತಾರೆ. ಇಬ್ಬರ ಜೋಡಿ ತೆರೆ ಮೇಲೆ ಅಂದವಾಗಿ ಮೂಡಿಬಂದಿದೆ. ಅದರಲ್ಲೂ ‘ಮುದ್ದು ರಾಕ್ಷಸಿ’ ಮೆಲೋಡಿ ಸಾಂಗ್ ಕಳಸ ಇಟ್ಟಂತೆ ಇದೆ. ಉಳಿದಂತೆ ಸಂಪತ್, ಅಚ್ಯುತಕುಮಾರ್, ಆದಿತ್ಯಮೆನನ್, ಕಾಕ್ರೋಚ್‌ಸುಧಿ, ಪೆಟ್ರೋಲ್ ಪ್ರಸನ್ನ ಇವರೆಲ್ಲರೂ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ನೋಡಲು, ಕೇಳಲು ಹಿತವೆನಿಸುತ್ತದೆ. ಒಟ್ಟಾರೆ ಆಕ್ಷನ್ ಪ್ರಿಯರಿಗೆ ಬಾಡೂಟ ಸಿಕ್ಕಂತೆ ಆಗುತ್ತದೆ.
****