ಚಿತ್ರ: *ಖದೀಮ****
*ಕಥೆ,ಚಿತ್ರಕಥೆ ಮತ್ತು ನಿರ್ದೇಶನ*: ಸಾಯಿ ಪ್ರದೀಪ್
*ನಿರ್ಮಾಣ*: ಟಿ.ಸಿವಕುಮಾರನ್
*ಸಹ ನಿರ್ಮಾಪಕಿ*: ಯಶಸ್ವಿನಿ.ಆರ್
*ಸಂಗೀತ*: ಶಶಾಂಕ್‌ಶೇಷಗಿರಿ
*ಕಲಾವಿದರು*: ಚಂದನ್, ಅನುಷಾಕೃಷ್ಣ, ಮುಖ್ಯಮಂತ್ರಿ ಚಂದ್ರು, ಶೋಭರಾಜ್, ಗಿರಿಜಾಲೋಕೇಶ್, ಯಶ್‌ಶೆಟ್ಟಿ, ವಿ.ಮನೋಹರ್,ಶಿವಕುಮಾರ್ ಆರಾಧ್ಯ, ಮಿಮಿಕ್ರಿ ದಯಾನಂದ್, ಅರಸು, ದಡಿಯ ಗಿರೀಶ್ ಮುಂತಾದವರು
*ಮಾರ್ಕೆಟ್‌ದಲ್ಲಿ ಅರಳುವ ನವಿರಾದ ಪ್ರೀತಿ*
ಸಾಮಾನ್ಯವಾಗಿ ಸಿಟಿ ಮಾರ್ಕೆಟ್ ಅಂದರೆ ಅಲ್ಲಿನ ದಂದೆಗಳು, ಪುಡಿ ರೌಡಿಸಂ ಇವುಗಳನ್ನು ತೋರಿಸುವ ಸಿನಿಮಾಗಳು ಬಂದಿದೆ. ಆದರೆ *ಖದೀಮ* ಚಿತ್ರದಲ್ಲಿ ಇದೆಲ್ಲಾವನ್ನು ಪಕ್ಕಕ್ಕೆ ಇಟ್ಟು, ಇಲ್ಲಿಯೂ ಪ್ರೀತಿ ಅರಳುತ್ತದೆ ಎಂಬುದನ್ನು ತೋರಿಸಿರುವುದು ವಿಶೇಷ.
ಮಾರ್ಕೆಟ್ ಸೂರ್ಯ ಸಣ್ಣ ಪುಟ್ಟ ಕಳ್ಳತನಗಳನ್ನು ಮಾಡಿಕೊಂಡು, ಅಲ್ಲಿನ ಪುಡಾರಿಗೆ ಚೇಳ ಆಗಿರುತ್ತಾನೆ. ಒಮ್ಮೆ ಹುಡುಗಿಯನ್ನು ಕಂಡು ಅವಳ ಪ್ರೀತಿಯನ್ನು ಸಂಪಾದಿಸುವಲ್ಲಿ ಸಪಲನಾಗುತ್ತಾನೆ. ಈತನನ್ನು ಸಾಕಿ ಬೆಳಸಿದ ವೃದ್ದರು ಹಿಂದಿನ ಜೀವನವನ್ನು ಮರೆತು ಸಮಾಜದಲ್ಲಿ ಒಳ್ಳೆ ಮನುಷ್ಯನಾಗಿ ಬದುಕೆಂದು ಬುದ್ದಿವಾದ ಹೇಳುತ್ತಾರೆ. ಇದನ್ನೆ ಗಂಭೀರವಾಗಿ ತೆಗೆದುಕೊಂಡು ಕೆಟ್ಟ ಹಾದಿಗೆ ತಿಲಾಂಜಲಿ ಇಡುತ್ತಾನೆ. ಅಷ್ಟರಲ್ಲೇ ಈತನ ಕೆಲಸ ಕಂಡು ಅವಳು ದೂರವಾಗುತ್ತಾಳೆ. ಒಂದು ಸಂದರ್ಭದಲ್ಲಿ ಮತ್ತೆ ಹುಡುಕಿಕೊಂಡು ಬರುತ್ತಾಳೆ. ಅದಕ್ಕೆ ಕಾರಣವೇನು? ಅಲ್ಲಿನ ಭ್ರಷ್ಟ ಕಾರ್ಪೋರೇಟರ್‌ನ್ನು ಎದುರು ಹಾಕಿಕೊಂಡಾಗ ಎದುರಿಸಿದ ಸವಾಲುಗಳು ಏನು? ಅದರಲ್ಲಿ ಯಶಸ್ಸು ಕಾಣುತ್ತಾನಾ? ಆತನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ. ಮುಂದೆ ಇವನಿಂದ ಯಾರಿಗೆಲ್ಲಾ ಒಳ್ಳೇದು ಆಗುತ್ತದೆ. ಹಾಗೆಯೇ ಸಮಾಜಕ್ಕೆ ಏನೇನು ಸೇವೆ ಮಾಡುತ್ತಾನೆ? ಇದಿಷ್ಟು ಕಥೆಯ ತಳಹದಿ. ಇವೆಲ್ಲಾ ಸನ್ನಿವೇಶಗಳು, ಹೂ ಪೋಣಿಸಿದಂತೆ ದೃಶ್ಯಗಳು ಅಚ್ಚು ಕಟ್ಟಾಗಿ ಮೂಡಿಬಂದಿದೆ. ಜತೆಗೆ ಮಾಸ್ ಪ್ರಿಯರಿಗೆ ಖುಷಿ ಪಡಿಸಲೆಂದು ಜಬರ್‌ದಸ್ತ್ ಫೈಟ್‌ಗಳು ಸಿನಿಮಾಕ್ಕೆ ಕಳಸ ಇಟ್ಟಂತೆ ಆಗಿದೆ.
ಇಡೀ ಸಿನಿಮಾವು ನೋಡುಗರಿಗೆ ಬೋರ್ ಆಗದಂತೆ, ಪ್ರಶ್ನೆಗಳನ್ನು ಇಲ್ಲವಾಗಿಸಿ, ನೋಡುತ್ತಿರುವಷ್ಟು ಹೊತ್ತು ಬೆಕ್ಕಸ ಬೆರಗಾಗುವಂತೆ ಮಾಡುವ ಜಾಣ್ಮೆ ನಿರ್ದೇಶಕ ಸಾಯಿಪ್ರದೀಪ್ ಅವರಲ್ಲಿದೆ ಎಂಬುದು ತೆರೆ ಮೇಲೆ ಕಾಣಿಸುತ್ತದೆ. ರಿಯಲ್‌ದಲ್ಲಿ ಜಿಮ್ ಟ್ರೇನರ್ ಆಗಿರುವ ಚಂದನ್ ಪ್ರಥಮ ಅನುಭವದಲ್ಲಿ ನಾಯಕನಾಗಿ ನಟನೆ, ಡ್ಯಾನ್ಸ್ ಹಾಗೂ ಸಾಹಸದಲ್ಲಿ ಮಿಂಚಿದ್ದು, ಭವಿಷ್ಯದಲ್ಲಿ ಅವಕಾಶಗಳು ಸಿಗುವಂತೆ ಸಾಬೀತು ಪಡಿಸಿಕೊಂಡಿದ್ದಾರೆ. ರಂಗಕರ್ಮಿ ಅನುಷಾಕೃಷ್ಣ ನಾಯಕಿಯಾಗಿ ಅದೇ ಪಾತ್ರದಲ್ಲಿ ಕಾಣಿಸಿಕೊಂಡು, ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನುಳಿದಂತೆ ಪೆಟ್ಟಿ ಹೋಟೆಲ್ ದಂಪತಿಗಳಾಗಿ ಮುಖ್ಯಮಂತ್ರಿ ಚಂದ್ರು-ಗಿರಿಜಾಲೋಕೇಶ್, ಸೇಠು ಆಗಿ ವಿ.ಮನೋಹರ್, ಕುಡುಕನಾಗಿ ಮಿಮಿಕ್ರಿ ದಯಾನಂದ್, ಖಳನಾಗಿ ಶೋಭರಾಜ್, ಸದಾ ಫೋನ್ ಹಿಡಿದುಕೊಂಡು ನಗಿಸುವ ಅರಸು, ಸ್ಲಂ ವ್ಯಾಪರಸ್ತನಾಗಿ ಶಿವಕುಮಾರ್ ಆರಾಧ್ಯ, ಬ್ಯಾಂಕ್ ನೌಕರನಾಗಿ ದಡಿಯ ಗಿರೀಶ್, ಯಶ್‌ಶೆಟ್ಟಿ ಕ್ಲೈಮಾಕ್ಸ್‌ದಲ್ಲಿ ಬಂದು ಒದೆ ತಿಂದು ಸಾಯುತ್ತಾರೆ.
ಕವಿರಾಜ್-ಪ್ರಮೋದ್‌ಮರವಂತೆ-ಭರ್ಜರಿ,ಚೇತನ್‌ಕುಮಾರ್ ಸಾಹಿತ್ಯದ ಹಾಡುಗಳಿಗೆ ಶಶಾಂಕ್ ಶೇಷಗಿರಿ ಸಂಗೀತ ಒದಗಿಸುವ ಜತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಗಾರ್ಜುನ.ಆರ್.ಡಿ ಸೆರೆ ಹಿಡಿದಿರುವ ಮಾರ್ಕೆಟ್ ದ್ಯಶ್ಯಗಳು ಪ್ರೇಕ್ಷಕರಿಗೆ ಅಲ್ಲಿರುವಂತೆ ಕಂಡು ಬಂದು, ಅವರ ನಿರೀಕ್ಷೆಗಳಿಗೆ ಮೋಸ ಮಾಡಿಲ್ಲ. ಉಮೇಶ್.ಆರ್.ಬಿ. ಸಂಕಲನ, ವಿಕ್ರಂಮೋರ್-ಮಾಸ್‌ಮಾದ ಆಕ್ಷನ್‌ಗಳು ಮೈಜುಂ ಅನಿಸುತ್ತದೆ. ಒಟ್ಟಾರೆ ಸಿನಿಮಾವು ಕ್ರೇಜಿಯಾಗಿ ಶುರುವಾಗಿ, ಕ್ರೇಜಿಯಾಗಿ ಮುಗಿಯುತ್ತದೆ. ಅಲ್ಲದೆ ಡಬ್ಬಲ್ ಮೀನಿಂಗ್‌ಗೆ ಜಾಗ ಕೊಡದೆ, ಮುಜುಗರ ತರುವಂತ ಸೀನ್‌ಗಳು ಇಲ್ಲದೆ ಇರುವುದರಿಂದ ಕುಟುಂಬಸಮೇತ ನೋಡಬಹುದಾದ ಚಿತ್ರವೆಂದು ಘಂಟಾಘೋಷವಾಗಿ ಹೇಳಬಹುದು. ****