ಶ್.....ನಿಂದ ಎವಿಡೆನ್ಸ್ ವರೆಗೆ
ಪ್ರವೀಣ್ ಸಿ.ಪಿ. ಸಿನಿಜರ್ನಿ
ಇಂಟರಾಗೇಶನ್ ರೂಮ್‌ನಲ್ಲಿ ವಿಚಾರಣೆಯ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಜೊತೆಗೊಂದು ತ್ರಿಕೋನ ಪ್ರೇಮದ ಎಳೆ ಇಟ್ಟುಕೊಂಡು ಪ್ರವೀಣ್ ಸಿಪಿ. ಆಕ್ಷನ್ ಕಟ್ ಹೇಳಿರುವ ಚಿತ್ರ ಎವಿಡೆನ್ಸ್ ತೆರೆಗೆ ಬರಲು ಸಿದ್ದವಾಗಿದೆ. ಪ್ರವೀಣ್ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ. ಸೂಪರ್‌ಸ್ಟಾರ್ ಉಪೇಂದ್ರ ಅವರ ಜೊತೆ ಶ್.. ಚಿತ್ರದಿಂದಲೂ ಇದ್ದವರು. ಹಾಸನ ಜಿಲ್ಲೆ ಚನ್ನರಾಯಪಟ್ಟಣದವರಾದ ಪ್ರವೀಣ್‌ರ ತಂದೆಯೂ ಪತ್ರಿಕೆಯಲ್ಲಿ ಕೆಲಸ ಮಾಡಿದವರು. ಆಗಾಗ ಅವರಜೊತೆ ಹೋಗುತ್ತಲೇ ಸಾಹಿತ್ಯದ ನಂಟು ಬೆಳೆಸಿಕೊಂಡ ಪ್ರವೀಣ್, ಆನಂತರ ಬೆಂಗಳೂರಿಗೆ ಬಂದು ಫೋಟೋಷಾಪ್, ಡಿಸೈನ್ ವರ್ಕ್ ಕಲಿಯಲು ಹೋದಾಗ ಇವರಿಗೆ ಉಪೇಂದ್ರ ಅವರ ಆಪ್ತ ಸ್ನೇಹಿತ ಗೋಪಾಲ್ ಪರಿಚಯವಾದರು. ಇವರ ಮೂಲಕ ಉಪೇಂದ್ರ ಜೊತೆ ಸಹಾಯಕನಾಗಿ ಕೆಲಸ ಮಾಡೋ ಅವಕಾಶ ಸಿಕ್ಕಿದೆ. ಆರಂಭದಲ್ಲಿ ರಿಜೆಕ್ಟ್ ಆದರೂ ನಂತರ ಅವಕಾಶ ಮತ್ತೆ ಗಿಟ್ಟಿಸಿಕೊಂಡ ಪ್ರವೀಣ್ ಉಪ್ಪಿಜೊತೆ ಶ್.. ಚಿತ್ರದಿಂದ ಹಿಡಿದು ಉಪೇಂದ್ರ-2 ವರೆಗೂ ಕೆಲಸ ಮಾಡಿದ್ದಾರೆ. ಅಲ್ಲಿ ಸಿನಿಮಾ ಮೇಕಿಂಗ್ ನ ವಿವಿಧ ಹಂತಗಳನ್ನು ಕಲಿತುಕೊಂಡಿದ್ದಾರೆ. ಅಲ್ಲದೆ ಕೃಪಾಕರ ಅವರ ಜೊತೆಸೇರಿ ಸಂಗೀತದ ಬಗ್ಗೆ ತಿಳಿದುಕೊಂಡಿದ್ದಾರೆ.
ಆನಂತರ ಸ್ವತಂತ್ರವಾಗಿ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ ಪ್ರವೀಣ್ ಗೆ ಮೊದಲ ಹೆಜ್ಜೆಯಲ್ಲೇ ಸಂಕಷ್ಟ ಎದುರಾಗಿದೆ. ತಾನೇ ನಿರ್ದೇಶಿಸಿದ ಚಿತ್ರವನ್ನು ಬೇರೊಬ್ಬರಿಗೆ ಕೊಟ್ಟಿದ್ದಾರೆ. ಆನಂತರ 2 ಸಿನಿಮಾಗಳನ್ನು ಆರಂಭಿಸಿದರೂ ಕಂಪ್ಲೀಟ್ ಮಾಡಲಾಗಲಿಲ್ಲ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಛಾಯಾಗ್ರಾಹಕ ರವಿ ಸುವರ್ಣ ಅವರ ಜೊತೆ ಸೇರಿ ಎವಿಡೆನ್ಸ್ ಕಥೆ ರೆಡಿ ಮಾಡಿಕೊಂಡಿದ್ದಾರೆ. ಅದೇ ಚಿತ್ರವೀಗ ಬಿಡುಗಡೆಯ ಹಂತ ತಲುಪಿದೆ. ಮೇ 24ಕ್ಕೆ ಎವಿಡೆನ್ಸ್ ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಅದಕ್ಕೂ ಮುನ್ನ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರದ ನಿರ್ದೇಶಕ, ನಿರ್ಮಾಪಕರೂ ಆದ ಪ್ರವೀಣ್ ಹಾಕಿಕೊಂಡಿದ್ದಾರೆ.
ಡಾ.ಕೊಡ್ಲಾಡಿ ಸುರೇಂದ್ರಶೆಟ್ಟಿ, ಶ್ರೀನಿವಾಸ್‌ಪ್ರಭು, ಕೆ.ಮಾದೇಶ್(ಕೊಡಿಹಳ್ಳಿ), ನಟರಾಜ್ ಸಿ.ಎಸ್.(ಚನ್ನಸಂದ್ರ) ಇವರೆಲ್ಲ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಅಲ್ಲದೆ ಅರವಿಂದ್ ಅಚ್ಚು, ಎಂ.ಎನ್.ರವೀಂದ್ರರಾವ್(ದೂರದರ್ಶನ), ಪ್ರಶಾಂತ್ ಸಿ.ಪಿ. ರಮೇಶ್ ಕೆ, ಕಿಶೋರ್‌ಬಾಬು ಮತ್ತು ನರಸಿಂಹಮೂರ್ತಿ ಇವರ ಸಹ ನಿರ್ಮಾಣ ಈ ಚಿತ್ರಕ್ಕಿದೆ.
ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರವೀಣ್ ಸಿಪಿ. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ನೆಲಮಂಗದದಲ್ಲಿ ಚಿತ್ರೀಕರಿಸಲಾಗಿರುವ ಈ ಚಿತ್ರದಲ್ಲಿ ನಾಯಕನಾಗಿ ಜೋಶ್ ಖ್ಯಾತಿಯ ರೋಬೊ ಗಣೇಶನ್ ನಟಿಸಿದ್ದು, ಮಾನಸ ಜೋಶಿ ನಾಯಕಿಯಾಗಿದ್ದಾರೆ. ಉಳಿದಂತೆ ಆಕರ್ಷ್ ಆದಿತ್ಯ, ರಚಿತಾ, ಪೂಜಿತ ಬೋಬೆಗೌಡ, ಚಮಕ್‌ಚಂದ್ರ, ಪವನ್‌ಸುರೇಶ್, ಶಶಿಧರಕೋಟೆ, ಮನಮೋಹನ್ ರೈ, ಆರಾಧ್ಯ ಶಿವಕುಮಾರ್ ನಟಿಸಿದ್ದಾರೆ. ಆರೋನ್ ಕಾರ್ತಿಕ್ ವೆಂಕಟೇಶ್ ಅವರ ಸಂಗೀತ, ರವಿ ಸುವರ್ಣ ಅವರ ಛಾಯಾಗ್ರಹಣ, ಆರ್.ಚಂದ್ರಶೇಖರ ಪ್ರಸಾದ್ ಅವರ ಸಂಭಾಷಣೆ, ಶೇಷಾಚಲ ಕುಲಕರ್ಣಿ ಅವರ ಸಂಕಲನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.