ಕಲರ್ಸ್ ಕನ್ನಡದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ
ಮೊದಲ ಹೆಚ್‌ಡಿ ಚಾನಲ್ ಎಂದು ಕರೆಸಿಕೊಂಡಿರುವ ‘ಕಲರ‍್ಸ್ ಕನ್ನಡ’ ವಾಹಿನಿಯಲ್ಲಿ ಮೂರು ವರ್ಷದ ನಂತರ ಕನ್ನಡದ ಅತಿ ದೊಡ್ಡದಾದ ರಿಯಾಲಿಟಿ ಶೋ ‘ತಕಧಿಮಿತ’ ಶುರು ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿದೆ. ಈ ಬಾರಿ ಹಲವು ವಿಶೇಷತೆಗಳು ಇರುವುದು ಕಾರ್ಯಕ್ರಮಕ್ಕೆ ಮೆರುಗು ನೀಡಲಿದೆ. ಎಂದಿನಂತೆ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರು ಇವರೊಂದಿಗೆ ಹೊಸ ಪ್ರಯೋಗ ಎನ್ನುವಂತೆ ೧೪ ಸಾಮಾನ್ಯ ವರ್ಗಕ್ಕೆ ಸೇರಿರುವ ಪ್ರತಿಭೆ ಇರುವ ನೃತ್ಯಪಟುಗಳನ್ನು ಅಡಿಷನ್ ಮೂಲಕ ಆಯ್ಕೆ ಮಾಡಲಾಗಿದೆ. ಸದರಿ ಶೋನಲ್ಲಿ ಒಬ್ಬೋಬ್ಬ ಸೆಲೆಬ್ರಿಟಿಯೊಂದಿಗೆ ಒಬ್ಬ ಸಾಮಾನ್ಯ ವ್ಯಕ್ತಿ ಒಂದು ತಂಡವಾಗಿ ಭಾಗವಹಿಸುತ್ತಾರೆ. ಅಂತಹ ಹದಿನಾಲ್ಕು ಜೋಡಿಗಳು ಸ್ಪರ್ಧೆಯಲ್ಲಿ ಗೆಲ್ಲಲು ಪೈಪೋಟಿ ನಡೆಸುತ್ತಾರೆ. ತೀರ್ಪುಗಾರರು ನೀಡುವ ಅಂಕಗಳ ಆಧಾರದಲ್ಲಿ ಕನಿಷ್ಟ ಅಂಕ ಪಡೆಯುವ ಮೂರು ಜೋಡಿಗಳು ಡೇಂಜರ್ ಝೋನ್‌ಗೆ ತಲುಪುತ್ತಾರೆ. ಇಂತಹ ಸ್ಪರ್ಧಿಗಳು ತಮ್ಮ ಬೆಂಬಲಿಗರ ಮತ ಯಾಚಿಸಲು ಅವಕಾಶ ವಿರುತ್ತದೆ. ವೀಕ್ಷಕರು ವೂಟ್ ಅಪ್‌ನಲ್ಲಿ ಮತ ಚಲಾಯಿಸುತ್ತಾರೆ. ಕಡಿಮೆ ಮತ ಪಡೆಯುವ ಸ್ಪರ್ಧಿ ವೇದಿಕೆಯಿಂದ ನಿರ್ಗಮಿಸಲಿದ್ದಾರೆ.
ಈ ಬಾರಿ ತೀರ್ಪುಗಾರರ ಪೈಕಿ ರವಿಚಂದ್ರನ್ ಅವರೊಂದಿಗೆ ಹೊಸದಾಗಿ ಹಿರಿಯ ನಟಿ ಸುಮನ್‌ರಂಗನಾಥ್ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀರ್ಪುಗಾರರಾಗಿದ್ದ ಕನ್ನಡತಿ ಸುಪ್ರಸಿದ್ದ ಶಾಸ್ತ್ರೀಯ ಶೈಲಿಯ ನೃತ್ಯಗಾತಿ ಅನುರಾಧವಿಕ್ರಾಂತ್ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಜವಬ್ದಾರಿ ಇವರದಾಗಿರುತ್ತದೆ. ಅಂತಿಮವಾಗಿ ವಿಜೇತ ಜೋಡಿಗಳಿಗೆ ಹತ್ತು ಲಕ್ಷ ನಗದು ಬಹುಮಾನ ನೀಡಲಾಗುವುದು. ಕಾರ್ಯಕ್ರಮದ ನಿರ್ದೇಶಕಿ ಶ್ರದ್ದ, ಮುಖ್ಯಸ್ಥರಾಗಿ ಪರಮೇಶ್ವರ್‌ಗುಂಡ್ಕಲ್ ಮತ್ತು ನಿರೂಪಕ ಅಕುಲ್‌ಬಾಲಾಜಿ ಸಾರಥ್ಯದಲ್ಲಿ ಫೆಬ್ರವರಿ ೨ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ ೮ ಘಂಟಗೆ ಹದಿನಾರು ವಾರಗಳ ಕಾಲ ಪ್ರಸಾರವಾಗಲಿದೆ.