Bombhat Bhojana.1000 Episode.

Sunday, January 07, 2024

98

 

" *ಬೊಂಬಾಟ್ ಭೋಜನ" ಕ್ಕೆ ಸಾವಿರದ ಸಂಭ್ರಮ* .

 

 *ಮಕರ ಸಂಕ್ರಾಂತಿಯಿಂದ ನಾಲ್ಕನೇ ಆವೃತ್ತಿ ಆರಂಭ* .

 

ನಟ-ನಿರ್ದೇಶಕ ಸಿಹಿಕಹಿ ಚಂದ್ರು ಸ್ಟಾರ್ ಸುವರ್ಣದಲ್ಲಿ ನಡೆಸಿಕೊಡುತ್ತಿರುವ ‘ಬೊಂಬಾಟ್‍ ಭೋಜನ’ ಕಾರ್ಯಕ್ರಮವು ಇದೀಗ 1000 ಸಂಚಿಕೆಗಳನ್ನು ಪೂರೈಸಿದೆ.   ಈ ಕಾರ್ಯಕ್ರಮದ ಮೂರನೇ ಆವೃತ್ತಿ ಇದೀಗ ಮುಗಿದಿದ್ದು, ಜನವರಿ 15ರಂದು ಮಕರ ಸಂಕ್ರಾಂತಿಯಂದು ನಾಲ್ಕನೇ ಆವೃತ್ತಿ ಆರಂಭವಾಗಲಿದೆ. 

 

ಮೂರನೇ ಸೀಸನ್‍ 1000 ಕಂತುಗಳನ್ನು ಮುಗಿಸಿರುವ ಹಾಗೂ  ನಾಲ್ಕನೆಯ ಆವೃತ್ತಿ ಆರಂಭವಾಗಲಿರುವ ಈ ಹೊತ್ತಿನಲ್ಲಿ ಚಂದ್ರು ಸಂಭ್ರಮದ ಸಮಾರಂಭವೊಂದನ್ನು ಆಯೋಜಿಸಿದ್ದರು.  ಆಪ್ತರು, ಮಿತ್ರರು ಮತ್ತು ವಾಹಿನಿಯವರನ್ನು ಆಮಂತ್ರಿಸಿ ಒಂದು ವಿಶೇಷ ಕಾರ್ಯಕ್ರಮವನ್ನು ಮಾಡಿ, ಬಂದವರಿಗೆ "ಬೊಂಬಾಟ್ ಭೋಜನ" ಹಾಕಿಸಿ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಣೆ ನೀಡಿದರು.

 

 ಮೂರನೆಯ ಆವೃತ್ತಿಯ ಬಗ್ಗೆ  ಮಾತನಾಡಿದ ಚಂದ್ರು, ‘ನಾಡಿನ ಹಲವು ಜಿಲ್ಲೆಗಳಿಗೆ ಹೋಗಿ ಅಲ್ಲಿನ ಮಹಿಳಾ ಮಂಡಳಿ ಸದಸ್ಯರಿಗೆ ಅಡಿಗೆ ಮಾಡಿ ತೋರಿಸಲಾಗಿದೆ. ಆಹ್ವಾನಿಸಿದವರ ಮನೆಗೆ ಹೋಗಿ ಅವರು ಪ್ರೀತಿಯಿಂದ ಮಾಡಿದ ತಿಂಡಿಯನ್ನು ಸವಿದು ಬಂದಿದ್ದೇನೆ. ಬರೀ ಅಡುಗೆಯಷ್ಟೇ ಅಲ್ಲ, ‘ಅಂದ ಚೆಂದ’ ಎಂಬ ಹೊಸ ವಿಭಾಗಗಳ ಮೂಲಕ ಮಹಿಳೆಯರು ತಮ್ಮ ಅಂದ ಹೆಚ್ಚಿಸಿಕೊಳ್ಳು ಮೇಕಪ್‍, ಕೇಶವಿನ್ಯಾಸ ತರಬೇತಿ ನೀಡಲಾಗಿದೆ. ಗೌರಿಯಮ್ಮ ನಡೆಸಿಕೊಡುವ ‘ಅಂಗೈಲಿ ಆರೋಗ್ಯ’ ವಿಭಾಗದಲ್ಲಿ ಹಲವು ಆರೋಗ್ಯದ ಟಿಪ್ಸ್ ಗಳನ್ನು ನೀಡಲಾಗಿದೆ. ಈ ಬಾರಿ ಅಮೇರಿಕಾ, ಆಫ್ರಿಕಾ ಮುಂತಾದ ಕಡೆ ಹೋಗಿ ಅಡುಗೆ ಕಾರ್ಯಕ್ರಮ ಮಾಡಿ ಬಂದಿರುವುದು ವಿಶೇಷ ಎಂದರು.

‘ಬೊಂಬಾಟ್ ಭೋಜನ " ಸೀಸನ್ 3ರಲ್ಲಿ  ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭಾಸ್ಕರ್ ರಾವ್‍, ಸುಧಾ ಮೂರ್ತಿ, ಗುರುರಾಜ ಕರ್ಜಗಿ ಸೇರಿದಂತೆ ಹಲವರು ಗಣ್ಯರು  ಭಾಗವಹಿಸಿದ್ದಾರೆ. ನಾನು ಶಿವಕುಮಾರ್ ‍ಇಬ್ಬರೂ ಬಾಲ್ಯ ಸ್ನೇಹಿತರು. ಯಾವತ್ತೂ ಏನೂ ಕೇಳಿರಲಿಲ್ಲ. ಈ ಕಾರ್ಯಕ್ರಮಕ್ಕೆ ಬರುವಂತೆ ಕೇಳಿದಾಗ, ಸಂತೋಷದಿಂದ ಬಂದು ಭಾಗವಹಿಸಿದರು. ಗುರುರಾಜ ಕರ್ಜಗಿ ನಮ್ಮ ಮೇಷ್ಟ್ರು. ಅವರು ಸಹ ಪ್ರೀತಿಯಿಂದ ಬಂದರು. ಹೀಗೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ’ ಎಂದು ಚಂದ್ರು ತಿಳಿಸಿದರು.

 

‘ಬೊಂಬಾಟ್‍ ಭೋಜನ’ ಮೂರು ಸೀಸನ್‍ಗಳಿಂದ 2000ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿವೆ. ಇದೊಂದು ದಾಖಲೆ ಎಂದು ಮಾಹಿತಿ ನೀಡಿದ ಸಿಹಿಕಹಿ ಚಂದ್ರು, ಮುಂದಿನ ದಿನಗಳಲ್ಲಿ ನೋಡಿಕೊಂಡು ಗಿನ್ನೀಸ್‍ ಅಥವಾ ಲಿಮ್ಕಾ ಬುಕ್‍ ಆಫ್‍ ರೆಕಾರ್ಡ್ಸ್ ಸಂಸ್ಥೆಗಳಿಗೆ  ಸೂಕ್ತ ದಾಖಲೆ ಸಲ್ಲಿಸುವುದಾಗಿ ಹೇಳಿದರು.

 

ಈ ಸಂದರ್ಭದಲ್ಲಿ ‘ಬೊಂಬಾಟ್‍ ಭೋಜನ 3’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಾಗೆಯೇ, ಚಂದ್ರು ಅವರನ್ನು ಸ್ಟಾರ್ ಸುವರ್ಣ ವಾಹಿನಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

Copyright@2018 Chitralahari | All Rights Reserved. Photo Journalist K.S. Mokshendra,